ಕಲಬುರಗಿ/ಬೆಂಗಳೂರು: ಆಪರೇಷನ್ ಕಮಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ದೇವದುರ್ಗ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿದೆ.
ತಮ್ಮ ವಿರುದ್ಧ ದೇವದುರ್ಗ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ತೆರವು ಮಾಡುವಂತೆ ಕೋರಿ ಸಿಎಂ ಬಿಎಸ್ ವೈ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಶಾಸಕರಾದ ಶಿವನಗೌಡ ನಾಯಕ್, ಪ್ರೀತಮ್ ಗೌಡ ಹಾಗೂ ಎಂ.ಬಿ ಮರಮಕಲ್ ಪ್ರತ್ಯೇಕವಾಗಿ ಮತ್ತೊಂದು ಅರ್ಜಿ ಸಲ್ಲಿಸಿ ಎಫ್ಐಆರ್ ರದ್ದು ಕೋರಿದ್ದರು.
ಈ ಅರ್ಜಿಗಳನ್ನು ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಈ ಮೊದಲು ಎಫ್ಐಆರ್ ಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವು ಮಾಡಿ ಆದೇಶಿಸಿದೆ. ಈ ಮೂಲಕ ಪೊಲೀಸ ತನಿಖೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.
ಪ್ರಕರಣದ ಹಿನ್ನೆಲೆ:
ಬಿಜೆಪಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ತಂದೆಗೆ ಜೆಡಿಎಸ್ ಬಿಟ್ಟು ಬಿಜೆಪಿ ಪಕ್ಷ ಸೇರುವಂತೆ ಆಮಿಷ ಒಡ್ಡಿದ್ದರು ಎಂದು ಆರೋಪಿಸಿ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡ ದೇವದುರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ ಬಳಿಕ ಅದನ್ನು ರದ್ದುಗೊಳಿಸುವಂತೆ ಕೋರಿ ಬಿಎಸ್‌ವೈ ಹಾಗೂ ಇತರೆ ನಾಯಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಫ್ಐಆರ್‌ಗೆ ಮಧ್ಯಂತರ ತಡೆ ನೀಡಿ ಆದೇಶಿಸಿತ್ತು. ಇದೀಗ ತಡೆ ತೆರವು ಮಾಡಿದೆ.