ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಜಾಮೀನು ಕೋರಿ ನಟಿ ಸಂಜನಾ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಸಿಬಿ ಪೊಲೀಸರ ಪರ ವಾದಿಸಿದ ಎಸ್‌ಪಿಪಿ, ಡ್ರಗ್ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆ ಮಾಡಲು ಆಗ್ರಹಿಸಿ ಅನಾಮಿಕರು ಸ್ಫೋಟಕ ವಸ್ತುಗಳ ಸಮೇತ ಎನ್‌ಡಿಪಿಎಸ್ ಕೋರ್ಟ್ ನ್ಯಾಯಾಧೀಶಕರಿಗೆ ಪತ್ರ ಬರೆದಿದ್ದಾರೆ. ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಜನಾ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಸದ್ಯ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಇಲ್ಲ. ಆ ನ್ಯಾಯಾಲಯವು ಆರೋಪಿಗಳಿಗೆ ಈಗಾಗಲೇ ಜಾಮೀನು ನಿರಾಕರಿಸಿದೆ. ಅದರಿಂದಲೇ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಆ ಪತ್ರದ ವಿಚಾರ ಇಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ ಎಂದರು.
ಸರ್ಕಾರದ ಪರ ವಿಶೇಷ ಅಭಿಯೋಜಕರು, ಡ್ರಗ್ ಪ್ರಕರಣದಲ್ಲಿ ಇತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳೊಂದಿಗೇ ಈ ಅರ್ಜಿಯನ್ನು ವಿಚಾರಣೆ ನಡೆಸಬಹುದು ಎಂದರು. ಸಲಹೆ ಒಪ್ಪಿದ ಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ. ಅಕ್ಟೋಬರ್ 22 ರಂದೇ ವಿಚಾರಣೆ ನಡೆಸೋಣ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.