ಬೆಂಗಳೂರು: ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ಅನರ್ಹ ಶಾಸಕರ ಹಾಗೂ ಉಪ ಚುನಾವಣೆಯ ವಿಚಾರಣೆ ಪೂರ್ಣಗೊಂಡ ನಂತರ, ರಾಜ್ಯದಲ್ಲಿ ಉಪಚುನಾವಣೆಯ ನೀತಿಸಂಹಿತೆ ಮುಂದೂಡಿರುವ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.
ರಾಜ್ಯದ 15 ಕ್ಷೇತ್ರಗಳಲ್ಲಿ ಘೋಷಣೆಯಾಗಿರುವ ಉಪ ಚುನಾವಣೆಯ ನೀತಿ ಸಂಹಿತೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಮುಂದೂಡಿರುವ ಕ್ರಮವನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು.
ಅರ್ಜಿದಾರರು ನ್ಯಾಯಾಲಯದಲ್ಲಿ ರಾಜ್ಯದ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ. ಆದರೆ ನೀತಿ ಸಂಹಿತೆಯನ್ನು ನವೆಂಬರ್ 11 ಕ್ಕೆ ಮುಂದೂಡಿದೆ. ಇದನ್ನು ರದ್ದುಗೊಳಿಸಬೇಕು. ಚುನಾವಣಾ ನೀತಿ ಸಂಹಿತೆ ಸೆಪ್ಟೆಂಬರ್ 17 ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು. ಉಪ ಚುನಾವಣೆಯ ದಿನಾಂಕವನ್ನು ಗುರುತಿಸಿದ ಬಳಿಕ ರಾಜ್ಯ ಸರ್ಕಾರವು ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿದೆ. ಈ ನೇಮಕಗಳನ್ನು ರದ್ದುಗೊಳಿಸಬೇಕು ಎಂದು ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಸದ್ಯ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಹಾಗೂ ಉಪ ಚುನಾವಣೆಯ ವಿಚಾರಣೆ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಉಪಚುನಾವಣೆಯ ನೀತಿಸಂಹಿತೆ ಮುಂದೂಡಿರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಎಂದು ಹೈಕೋರ್ಟ್ ತಿಳಿಸಿದೆ.