ಬೆಂಗಳೂರು: ವಿವಾದಿತ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ಗೊಂದಲ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದಾಗಿದೆ ಎಂದು ಬಿಬಿಎಂಪಿ ಘೋಷಣೆ ಮಾಡಿದ್ದನ್ನು ಪ್ರಶ್ನಿಸಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕ ಸದಸ್ಯ ಪೀಠವು ನ್ಯಾಯಾಲಯದ ಮುಂದಿನ ಆದೇಶದ ತನಕ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದೆ.
ಯಥಾಸ್ಥಿತಿ ಕಾಪಾಡಲು ಆದೇಶ ನೀಡಿದ್ದರಿಂದ ಈದ್ಗಾ ಮೈದಾನದಲ್ಲಿ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಮತ್ತು ಶುಕ್ರವಾರ ನಮಾಜ್ಗೆ ಅವಕಾಶ ನೀಡಬೇಕೆನ್ನುವ ಉಭಯ ಕಡೆಯ ಸಂಘ ಸಂಸ್ಥೆಗಳ ಬೇಡಿಕೆಗೆ ಅವಕಾಶ ಸಿಗದಂತಾಗಿದೆ. ವಿವಾದಿತ ಮೈದಾನದಲ್ಲಿ ಈ ಹಿಂದಿನಂತೆ ರಂಜಾನ್ ಮತ್ತು ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈದ್ಗಾ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದಾಗಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಅವರು ಇತ್ತೀಚೆಗೆ ಆಗಸ್ಟ್ 6ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್ಗೆ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಉತ್ತರಿಸಲು ರಾಜ್ಯ ಸರ್ಕಾರ ಕಾಲಾವಕಾಶ ಕೋರಿದ್ದರಿಂದ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.
ವಕ್ಫ್ ಮಂಡಳಿ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಈದ್ಗಾ ಮೈದಾನದ ಮಾಲೀಕತ್ವ ಸಂಬಂಧ ವ್ಯಾಜ್ಯದ ಕುರಿತು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದ ಅರೆ ನ್ಯಾಯಿಕ ಮಂಡಳಿಯ ಮುಂದೆ ನಡೆದ ವಿಚಾರಣೆಯಲ್ಲಿ ಬಿಬಿಎಂಪಿ ಸಹ ಪ್ರತಿವಾದಿಯಾಗಿದೆ. ಪ್ರತಿವಾದಿ ಸ್ಥಾನದಲ್ಲಿರುವ ಸಂಸ್ಥೆಯ ಅಧಿಕಾರಿಯೇ ಪ್ರಕರಣದ ಕುರಿತು ಆದೇಶ ಹೊರಡಿಸಲು ಅವಕಾಶವಿಲ್ಲ. ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಎರಡೂವರೆ ಎಕರೆ ವಿಸ್ತಾರದ ಚಾಮರಾಜಪೇಟೆಯ ಆಟದ ಮೈದಾನ ಆಸ್ತಿಯನ್ನು ವಕ್ಫ್ ಮಂಡಳಿ ಹೆಸರಿಗೆ ಖಾತಾ ಮಾಡಿಕೊಡುವಂತೆ ಕಳೆದ ಜೂನ್ 21ರಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಯು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು.
ಬಳಿಕ ಕಳೆದ ಆಗಸ್ಟ್ 3ರಂದು ಪಶ್ಚಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತುಪಡಿಸುವ ದಾಖಲೆ ಸಲ್ಲಿಸುವಲ್ಲಿ ವಕ್ಫ್ ಮಂಡಳಿ ವಿಫಲವಾಗಿದೆ ಎಂದು ತಿಳಿಸಿದ್ದ ಜಂಟಿ ಆಯುಕ್ತರು, ಅರ್ಜಿ ವಜಾಗೊಳಿಸಿ ಆಗಸ್ಟ್ 6ರಂದು ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿರುವುದು ಎಂದು ಆದೇಶಿಸಿದ್ದರು.
ಬಿಬಿಎಂಪಿಯು ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಣೆ ಮಾಡಿದ ನಂತರ ಉಂಟಾದ ವಿವಾದಗಳ ನಡುವೆಯೇ ರಾಜ್ಯ ಸರ್ಕಾರದ ಪರ ವಿವಾದಿತ ಸ್ಥಳದಲ್ಲಿ ಉಪ ವಿಭಾಗಾಧಿಕಾರಿಗಳು ಕಳೆದ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ವೇಳೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು.
ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ.. ಸಚಿವ ಆರ್ ಅಶೋಕ್