ಬೆಂಗಳೂರು : ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂಸದ ಪಿ.ಸಿ. ಮೋಹನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಈ ಕುರಿತು ನ್ಯಾಯಾಲಯ ಸಂಜ್ಞೇಯತೆ ತೆಗೆದುಕೊಂಡು ವಿಚಾರಣೆ ನಡೆಸುವಂತೆ ಆದೇಶಿಸಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಆಸ್ತಿ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ ಆರೋಪದಡಿ ದಾಖಲಿಸಿರುವ ಖಾಸಗಿ ದೂರು ಹಾಗೂ ಪ್ರಕರಣದ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಸಂಸದ ಮೋಹನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ಮನವಿ ವಜಾಗೊಳಿಸಿದೆ.
2014 ಮತ್ತು 2018ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುವಾಗ ಸಂಸದ ಪಿಸಿ ಮೋಹನ್ ತಮ್ಮ ಆಸ್ತಿ ವಿವರವನ್ನು ಮುಚ್ಚಿಟ್ಟಿದ್ದಾರೆ. ಬೆಂಗಳೂರು ಹೊರವಲಯದ ದೇವನಹಳ್ಳಿಯ ಲಕ್ಷ್ಮೀಪುರ ಗ್ರಾಮದಲ್ಲಿ 33 ಕೋಟಿಗೂ ಅಧಿಕ ಮೌಲ್ಯದ 42 ಎಕರೆ 14 ಗುಂಟೆ ಜಮೀನಿನ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಟಿ.ಆರ್. ಆನಂದ್ ಎಂಬುವರು ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಓದಿ: ಹೆಚ್ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ: ಜೆಡಿಎಸ್ ಸೇರಲು ರೆಡಿಯಾಗಿದ್ದಾರೆ ಮಾಂತ್ರಿಕ ಮಾತುಗಾರ
ವಿಶೇಷ ನ್ಯಾಯಾಲಯವು ದೂರಿನ ತನಿಖೆ ನಡೆಸಲು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ 2019 ನ.8 ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿದ್ದ ಪಿ.ಸಿ. ಮೋಹನ್ ಅವರು, ತಾವು ಯಾವುದೇ ಮಾಹಿತಿ ಮುಚ್ಚಿಟ್ಟಿಲ್ಲ. ಪಿ.ಸಿ ರಿಯಾಲ್ಟಿ ಎಂಬ ಸಂಸ್ಥೆಗೆ ಆಸ್ತಿ ಖರೀದಿಸಲಾಗಿದ್ದು, ಈ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನಷ್ಟೆ ಹೊಂದಿದ್ದೇವೆ. ಹಾಗೆಯೇ ತಮ್ಮ ವಿರುದ್ಧದ ಆರೋಪಗಳು ಅಸಂಜ್ಞೇಯ ಅಪರಾಧ ಕೃತ್ಯದ ಸ್ವರೂಪವಾಗಿದ್ದು, ಪೊಲೀಸ್ ತನಿಖೆಗೆ ಆದೇಶಿಸಿರುವ ವಿಶೇಷ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಸಂಜ್ಞೇಯ ಅಪರಾಧ ಕೃತ್ಯಗಳಿರುವುದಕ್ಕೆ ದಾಖಲೆಗಳಿಲ್ಲ. ಹೀಗಾಗಿ ದೂರಿನ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸುವ ಅಗತ್ಯವಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸಿದರೆ ಚುನಾವಣಾ ನಾಮಪತ್ರದಲ್ಲಿ ಆಸ್ತಿ ಕುರಿತು ಸುಳ್ಳು ಮಾಹಿತಿ ಮತ್ತು ಸುಳ್ಳು ಸಾಕ್ಷ್ಯ ಒದಗಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ವಿಶೇಷ ನ್ಯಾಯಾಲಯವೇ ಪ್ರಕರಣದ ಕಾಗ್ನಿಜೆನ್ಸ್ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದೆ.