ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ವಿಚಾರಣೆ ವೇಳೆ ಪ್ರಕರಣದ ಕುರಿತು ಬೇಸರ ವ್ಯಕ್ತಪಡಿಸಿದ ಪೀಠ, ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದರೆ ಯಾರಿಗೂ ಇಲ್ಲ ಎಂದೇ ಅರ್ಥ. ಅಂತಹದ್ದರಲ್ಲಿ ರಾಜಕಾರಣಿಗಳು ಹೇಗೆ ಭೇಟಿ ನೀಡಲು ಸಾಧ್ಯ. ರಾಜಕಾರಣಿಗಳಿಗೆ ಇತರರಿಗಿಂತ ಹೆಚ್ಚು ಹೊಣೆಗಾರಿಕೆಯಿರುತ್ತದೆ. ಈ ಪ್ರಕರಣ ಸಂಬಂಧಪಟ್ಟ ಎಲ್ಲರ ಕಣ್ತೆರೆಸಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಅರಿವಾಗಬೇಕು.
ಹೀಗಾಗಿ ನಿರ್ಬಂಧ ಮೀರಿ ದೇವವಸ್ಥಾನ ಪ್ರವೇಶಿಸಿದವರ ವಿರುದ್ಧ ವಿಪ್ತತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಮುಜರಾಯಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಪ್ರಕರಣದ ಕುರಿತು ಜಿಲ್ಲಾಧಿಕಾರಿ ನಡೆಸಿದ್ದ ಪ್ರಾಥಮಿಕ ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಲಾಯಿತು. ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸಮರ್ಥನೆ ಕೊಡಲು ಯತ್ನಿಸಿದರು. ನಂಜನಗೂಡು ದೇವಸ್ಥಾನವನ್ನು ವಿಜಯೇಂದ್ರ ಪ್ರವೇಶಿಸಿದ್ದರು ನಿಜ.
ಆದರೆ, ವಿಶೇಷ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ವಿಜಯೇಂದ್ರ ಉದ್ದೇಶಪೂರ್ವಕವಾಗಿ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ. ಕೇವಲ ಐದು ಹತ್ತು ನಿಮಿಷವಷ್ಟೇ ದೇವಾಸ್ಥಾನದೊಳಗೆ ಇದ್ದರು ಎಂದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪೀಠ, ನಿರ್ಬಂಧ ಇದ್ದರೂ ಜನ ದೇವಾಲಯಕ್ಕೆ ಹೋಗಬಹುದೇ? ಅರ್ಚಕರದಷ್ಟೇ ಹೊಣೆಯೇ? ಹೋದವರದ್ದು ಇಲ್ಲವೇ? ಹಾಗಿದ್ದರೆ ಜನಸಾಮಾನ್ಯರಿಗೂ ಆ ಅವಕಾಶ ನೀಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿತು.