ಬೆಂಗಳೂರು: ಸಾಹಿತಿ ಹರಿಹರ ಪ್ರಿಯ ಅವರ ‘ಕುವೆಂಪು ಪತ್ರಗಳು’ ಕೃತಿಯನ್ನು ಬಳಕೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಧ್ಯಂತರ ತಡೆ ನೀಡಿದೆ.
2020ರಲ್ಲಿ ಹಂಪಿ ಕನ್ನಡ ವಿವಿ ಪ್ರಕಟಿಸಿರುವ 12 ಸಂಪುಟಗಳ ಕುವೆಂಪು ಸಾಹಿತ್ಯ ಸರಣಿಯ 12ನೇ ಸಂಪುಟದಲ್ಲಿ ತಮ್ಮ ರಚನೆಯ ‘ಕುವೆಂಪು ಪತ್ರಗಳು’ ಕೃತಿಯನ್ನು ಯಥಾವತ್ತಾಗಿ ನಕಲು ಮಾಡಿದೆ. ಇದು ಕೃತಿಚೌರ್ಯ ಎಂದು ಆರೋಪಿಸಿ ಹರಿಹರ ಪ್ರಿಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ನಗರದ 18ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್, ದಾವೆ ಇತ್ಯರ್ಥವಾಗುವವರೆಗೆ ‘ಕುವೆಂಪು ಪತ್ರಗಳು’ ಕೃತಿಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಂಶೋಧನಾ ಉದ್ದೇಶಗಳಿಗೆ ಹೊರತುಪಡಿಸಿ, ಬೇರಾವುದೇ ರೀತಿಯಲ್ಲಿ ಬಳಕೆ ಮಾಡದಂತೆ, ಪ್ರಕಟಿಸದಂತೆ, ಮಾರಾಟ ಮಾಡದಂತೆ ವಿವಿಗೆ ಸೂಚಿಸಿ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ಹಿನ್ನೆಲೆ :
ಕುವೆಂಪು ಬದುಕು, ಸಾಹಿತ್ಯದ ಕುರಿತು ಅಧ್ಯಯನ ನಡೆಸಿರುವ ಹಿರಿಯ ಸಾಹಿತಿ ಹರಿಹರ ಪ್ರಿಯ, ಕುವೆಂಪು ಅವರು ತಮ್ಮ ಸಮಕಾಲೀನರಿಗೆ ಬರೆದಿದ್ದ 62 ಪತ್ರಗಳನ್ನು ಸಂಗ್ರಹಿಸಿ 1974ರಲ್ಲಿ ‘ಕುವೆಂಪು ಪತ್ರಗಳು’ ಕೃತಿ ರಚಿಸಿದ್ದರು. ಈ ಕೃತಿಯನ್ನು ಹಂಪಿ ಕನ್ನಡ ವಿವಿ ‘ಕುವೆಂಪು ಸಾಹಿತ್ಯ ಸರಣಿ’ ಪುಸ್ತಕದ 12ನೇ ಸಂಪುಟದಲ್ಲಿ ಯಥಾವತ್ತಾವಾಗಿ ನಕಲು ಮಾಡಿದೆ ಎಂಬುದು ಸಾಹಿತಿಯ ಆರೋಪ. ಈ ಸಂಬಂಧ ವಿವಿಗೆ ನೋಟಿಸ್ ಜಾರಿ ಮಾಡಿದ್ದರೂ, ಉತ್ತರ ಬಾರದ ಹಿನ್ನೆಲೆಯಲ್ಲಿ ಹರಿಹರ ಪ್ರಿಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.