ಬೆಂಗಳೂರು: ವಿಮೆ ಹೊಂದಿರುವ ವಾಹನ ಅಪಘಾತಕ್ಕೀಡಾದಲ್ಲಿ ನೋಂದಣಿಯಾಗದಿದ್ದರೂ ಘಟನೆಯಿಂದ ತೊಂದರೆಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ವಿಮಾ ಕಂಪೆನಿಯವರು ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಜವಾಬ್ದಾರನಾಗಿರುತ್ತಾರೆ. ವಿಮಾ ಕಂಪೆನಿ ಆ ಮೊತ್ತವನ್ನು ವಿಮಾದಾರರಿಂದ ಮರು ಪಡೆದುಕೊಳ್ಳಲು ಅವಕಾಶವಿದೆ ಎಂದು ಪೀಠ ತಿಳಿಸಿದೆ.
ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಬಸವರಾಜ ಬೀರಪ್ಪ ಕಂಬಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ. ಅಪಘಾತ ನಡೆದ ದಿನದಂದು ಘಟನೆಗೆ ಕಾರಣವಾದ ವಾಹನ ನೋಂದಣಿಯಾಗಿಲ್ಲ. ತಾತ್ಕಾಲಿಕ ನೋಂದಣಿಯಾಗಿ ಅದರ ಅವಧಿ ಮೀರಿದೆ. ಹೀಗಿರುವಾಗ ಘಟನೆಯಿಂದ ತೊಂದರೆಗೊಳಗಾದವರು ಮೂರನೇ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಮೂರನೇ ವ್ಯಕಿಗೆ ಪರಿಹಾರವನ್ನು ವಿಮಾ ಕಂಪೆನಿಯೇ ಪಾವತಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ರಾಣೆಬೆನ್ನೂರಿನ ಬಸವರಾಜ ಬೀರಪ್ಪ ಕಂಬಳಿ ಅವರು ಕಚೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿತ್ತು. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದ ಬಸವರಾಜು ಅವರು ದಾವಣಗೆರೆಯ ಸಿಜಿ ಆಸ್ಪತ್ರೆ, ಎಸ್‌ಎಸ್ ಆಸ್ಪತ್ರೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಪಘಾತಕ್ಕೆ ಕಾರಣವಾಗಿದ್ದ ಟಾಟಾ ಏಸ್ ವಾಹನ ಮಾಲೀಕರು ಕೋರಮಂಡಲಂ ಜನರಲ್ ಇನ್ಷೂರೆನ್ಸ್ ಕಂಪೆನಿಯಲ್ಲಿ ವಿಮೆ ಪಡೆದುಕೊಂಡಿದ್ದರು. ಆದರೆ, ವಾಹನ ತಾತ್ಕಾಲಿಕ ನೋಂದಣಿ ಸಂಖ್ಯೆ ಪಡೆದುಕೊಂಡಿದ್ದು, ಅದರ ಅವಧಿ ಮುಕ್ತಾಯವಾಗಿತ್ತು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮೋಟಾರ್ ವಾಹನ ನ್ಯಾಯಾಧಿಕರಣ ಅರ್ಜಿದಾರ ಬಸವರಾಜ ಅವರಿಗೆ 2,88,000 ರೂ.ಗಳ ಪರಿಹಾರ ನೀಡಿತ್ತು. ಹೆಚ್ಚಿನ ಪರಿಹಾರ ಕೋರಿ ಅರ್ಜಿದಾರರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿಚಾರಣಾ ನ್ಯಾಯಾಲಯ ಪರಿಹಾರ ಒದಗಿಸುವಲ್ಲಿ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿಲ್ಲ. ವೇತನ, ಆಸ್ಪತ್ರೆ ವೆಚ್ಚ, ದೈಹಿಕವಾಗಿ ಆಗಿರುವ ನಷ್ಟವನ್ನು ಸೂಕ್ತ ರೀತಿಯಲ್ಲಿ ಲೆಕ್ಕಪರಿಶೋಧನೆ ನಡೆಸದೆ ಪರಿಹಾರ ಘೋಷಣೆ ಮಾಡಿದೆ. ಹೆಚ್ಚುವರಿ ಪರಿಹಾರ ನೀಡಬೇಕು ಎಂದು ವಾದ ಮಂಡಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಮಾ ಕಂಪೆನಿಯ ಪರ ವಕೀಲರು, ಅಪಘಾತಕ್ಕೊಳಗಾದ ವಾಹನಕ್ಕೆ ವಿಮೆ ಇದ್ದರೂ, ಅದರ ನೋಂದಣಿ ಮಾಡಿಸಿಕೊಂಡಿಲ್ಲ. ತಾತ್ಕಾಲಿಕವಾಗಿ ಪಡೆದಿದ್ದ ವಿಮೆಯ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಹೆಚ್ಚುವರಿ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ್ದ ನ್ಯಾಯಪೀಠ, ವಿಮೆ ಇದ್ದಲ್ಲಿ ವಾಹನ ನೋಂದಣಿ ಮಾಡಿಸದಿದ್ದರೂ ಅಪಘಾತದಿಂದ ತೊಂದರೆಗೊಳಗಾದ ಮೂರನೇ ವ್ಯಕ್ತಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಸೂಚಿಸಿದೆ. ಅಲ್ಲದೆ, ಪರಿಹಾರ ಮೊತ್ತವನ್ನು 4,69,800 ರೂಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.
ಇದನ್ನೂ ಓದಿ: ಯೆಜ್ಡಿ ಪದ, ಟ್ರೇಡ್ ಮಾರ್ಕ್ ಬಳಸದಂತೆ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ.ಗೆ ಹೈಕೋರ್ಟ್ ಸೂಚನೆ