ಬೆಂಗಳೂರು: ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ಡೆ ಅಡಿ ಎಫ್ಐಆರ್ ದಾಖಲಿಸುವಂತೆ ಹೈಕೋರ್ಟ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಇದೀಗ ವಿಧಿಸುತ್ತಿರುವ ದಂಡವಷ್ಟೆ ಅಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಬೇಕು. ಈ ಕುರಿತಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸುವ ಮೂಲಕ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪೀಠ ನಿರ್ದೇಶಿಸಿತು.
ಸಭೆ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ, ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಾರ್ಯಕ್ರಮ ಆಯೋಜಕರೂ ಸೇರಿದಂತೆ ಪಾಲ್ಗೊಂಡವರ ವಿರುದ್ಧವೂ ಕ್ರಮ ಜರುಗಿಸಬೇಕು. ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಚಿತ್ರನಟರು ನಿಯಮಗಳನ್ನು ಪಾಲಿಸುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕಿತ್ತು.
ಆದರೆ, ಅವರೇ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ, ಯಾರೇ ನಿಯಮ ಉಲ್ಲಂಘಿಸಿದರೂ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಆರೋಗ್ಯಕರ ಜೀವನ ನಡೆಸುವುದು ಸಂವಿಧಾನ ನೀಡಿರುವ ಹಕ್ಕು. ಜನರ ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಅದರಂತೆ, ಕೋವಿಡ್ ನಿಯಂತ್ರಿಸಲು ದೈಹಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.