ಬೆಂಗಳೂರು: ಅವಧಿ ಪೂರ್ಣಗೊಂಡಿರುವ ರಾಜ್ಯದ 56 ನಗರ ಸ್ಥಳೀಯ ಸಂಸ್ಥೆಗಳಿಗೆ 2 ತಿಂಗಳ ಒಳಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅವಧಿ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಹೈಕೋರ್ಟ್ ದಾಖಲಿಸಿಕೊಂಡಿರುವ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಚುನಾವಣಾ ಆಯೋಗದ ಪರ ಹಿರಿಯ ವಕೀಲರು ವಸ್ತುಸ್ಥಿತಿ ವರದಿ ಸಲ್ಲಿಸಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆಗಳು ಹಾಗೂ ದೊಡ್ಡಬಳ್ಳಾಪುರ, ಬೀದರ್ ಮತ್ತು ಭದ್ರಾವತಿ ನಗರಸಭೆಗಳು ಹಾಗೂ ತರೀಕೆರೆ ಪುರಸಭೆಗೆ ಸೆ.6ರಂದು ಚುನಾವಣೆ ನಡೆಸಲಾಗಿದೆ.
2021ರ ಮೇ ತಿಂಗಳಿಂದ ಆಗಸ್ಟ್ ತಿಂಗಳ ನಡುವೆ 52 ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಂಡಿದೆ. ಅವುಗಳಲ್ಲಿ ಸದ್ಯ 2 ಸಂಸ್ಥೆಗಳಿಗೆ ಮಾತ್ರ ಮೀಸಲಾತಿ ಅಂತಿಮಗೊಳಿಸಲಾಗಿದ್ದು, ಇನ್ನೂ 50ಕ್ಕೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಬೇಕಿದೆ. ಜತೆಗೆ, 2019ರ ಮಾರ್ಚ್‌ನಲ್ಲಿ ಅವಧಿಪೂರ್ಣಗೊಂಡಿರುವ 6 ಸಂಸ್ಥೆಗಳಿಗೂ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ಮನವಿ ಪರಿಗಣಿಸಿದ ಪೀಠ, 2021ರಲ್ಲಿ ಅವಧಿ ಪೂರ್ಣಗೊಂಡಿರುವ ಸಂಸ್ಥೆಗಳಲ್ಲಿ 50 ಸಂಸ್ಥೆಗಳಿಗೆ ಹಾಗೂ 2019ರಲ್ಲಿ ಅವಧಿ ಪೂರ್ಣಗೊಂಡಿರುವ 6 ಸಂಸ್ಥೆಗಳಿಗೆ ಮುಂದಿನ 2 ತಿಂಗಳಲ್ಲಿ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತಲ್ಲದೆ, ಈ ಆದೇಶದ ಅನುಪಾಲನಾ ವರದಿಯನ್ನು ನ.17ರಂದು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.
ಇದನ್ನು ಓದಿ:ಕೆಆರ್ಎಸ್ ಸುತ್ತ ಗಣಿಗಾರಿಕೆ ನಿಲ್ಲಿಸಿದ್ದ ಜಿಲ್ಲಾಧಿಕಾರಿ ಆದೇಶ ರದ್ದುಪಡಿಸಿದ ಹೈಕೋರ್ಟ್