ಬೆಂಗಳೂರು: ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಕೆಲಸ ನಿಷೇಧ ಕಾಯ್ದೆ'ಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಎಲ್ಲಾ ಸ್ಥಳೀಯ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತು ಕಾರ್ಮಿಕ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ ಕಾಯ್ದೆ ಅಡಿ ದಾಖಲಿಸಿರುವ ಎಫ್ಐಆರ್ಗಳ ಸಂಖ್ಯೆ, ಶಿಕ್ಷೆಯಾದ, ಖುಲಾಸೆಯಾದ ಹಾಗೂ ವಿಚಾರಣೆ ಬಾಕಿ ಇರುವ ಪ್ರಕರಣಗಳ ವಿವರ ಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಜ್ಯ ಮತ್ತು ಜಿಲ್ಲಾ ಸಮಿತಿಗಳು ಗುರುತಿಸಿರುವ ಮಲಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ಸಂಖ್ಯೆ ಎಷ್ಟಿದೆ, ಅವರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವೆಲ್ಲ ಕ್ರಮಗಳನ್ನು ಕೈಗೊಂಡಿವೆ ಎಂಬುದರ ಸಮಗ್ರ ವರದಿಯನ್ನು ಜನವರಿ 30ರೊಳಗೆ ಸಲ್ಲಿಸುವಂತೆ ಸೂಚಿಸಿರುವ ಪೀಠ, ರಾಜ್ಯದಲ್ಲಿ ಬಯಲು ಬಹಿರ್ದೆಸೆ ನಿರ್ಮೂಲನೆಗೆ ವ್ಯಾಪಕ ಪ್ರಚಾರ ನೀಡಿ, ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.