ಬೆಂಗಳೂರು : ಚಿತ್ರಕಲಾ ಪರಿಷತ್‌ನಲ್ಲಿ (ಸಿಕೆಪಿ) 2007–2009ರ ಅವಧಿಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ಸಲ್ಲಿಸಿರುವ ವರದಿಯನ್ನು ಮೂರು ತಿಂಗಳ ಒಳಗಾಗಿ ಜಾರಿಗೊಳಿಸಿ ಎಂದು ಹೈಕೋರ್ಟ್, ಸಹಕಾರ ಸಂಘಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಈ ಕುರಿತಂತೆ ಡಾ. ಟಿ. ಎನ್ ಲಕ್ಷ್ಮಿಪತಿಬಾಬು ಹಾಗೂ ಟಿ.ಚಂದ್ರಶೇಖರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನಕುಮಾರ್, ‘ಸಿಕೆಪಿ ಅಧ್ಯಕ್ಷ ಟಿ. ಪ್ರಭಾಕರ ಹಾಗೂ ಕಾರ್ಯದರ್ಶಿ ಎಂ.ಜೆ ಕಮಲಾಕ್ಷಿ 2007ರಿಂದ 2009ರ ತಮ್ಮ ಅಧಿಕಾರಾವಧಿಯಲ್ಲಿ ವ್ಯಾಪಕ ಆರ್ಥಿಕ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾಬು ಈಶ್ವರ ಪ್ರಸಾದ್ ಮತ್ತು ಎಸ್. ಗೋಪಿನಾಥ್ ಸಹಕಾರ ಸಂಘಗಳ ನೋಂದಾಣಾಧಿಕಾರಿಗೆ ದೂರು ನೀಡಿದ್ದರು' ಎಂದು ತಿಳಿಸಿದರು.
ಅಲ್ಲದೇ, ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಜಿಲ್ಲಾ ನೋಂದಣಾಧಿಕಾರಿ 2015ರ ಅಕ್ಟೋಬರ್ 21ರಂದು ಸರ್ಕಾರಕ್ಕೆ ವರದಿ ನೀಡಿ ಒಟ್ಟು 60,62,648 ರೂಪಾಯಿ ಮೊತ್ತದ ಆರ್ಥಿಕ ಅವ್ಯವಹಾರ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿದ್ದರು.
ಆದರೆ, ಸರ್ಕಾರ ರಾಜಕೀಯ ಒತ್ತಡಗಳಿಗೆ ಮಣಿದು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಪ್ರಧಾನ ಕಾರ್ಯದರ್ಶಿ ಮೂರು ತಿಂಗಳೊಳಗೆ ವರದಿ ಜಾರಿಗೊಳಿಸಿ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿತು.
ಓದಿ: ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್