ಬೆಂಗಳೂರು: ರಾಜ್ಯದ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್ಎಸ್ಎಲ್) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು, ಅವುಗಳಿಗೆ ವೈಜ್ಞಾನಿಕ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಕಾಲಮಿತಿ ಹಾಕಿಕೊಳ್ಳದಿದ್ದರೆ, ನ್ಯಾಯಾಲಯವೇ ಸೂಕ್ತ ನಿರ್ದೇಶನಗಳನ್ನು ನೀಡಲಿದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಎಫ್ಎಸ್ಎಲ್ ಕೇಂದ್ರಗಳ ವಿಳಂಬ ಕಾರ್ಯವಿಧಾನ ನ್ಯಾಯದಾನ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಕುಂದುಕೊರತೆ ನಿವಾರಣೆಗಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಗತ್ಯ ನೆರವು ನೀಡಲು ನೇಮಕಗೊಂಡಿರುವ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲ ವೆಂಕಟೇಶ ಅರಬಟ್ಟಿ ವಾದಿಸಿ, ಪ್ರಯೋಗಾಲಯದಲ್ಲಿ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಹಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗಳು ಸೇರಿದಂತೆ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ. 84 ವೈಜ್ಞಾನಿಕ ಅಧಿಕಾರಿಗಳ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಎಫ್ಎಸ್ಎಲ್ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಪ್ರಾದೇಶಿಕ ಲ್ಯಾಬ್ ಸ್ಥಾಪಿಸುವ ಪ್ರಸ್ತಾಪ ಇನ್ನೂ ಕತಡದಲ್ಲೇ ಇದೆ. ಬೆಂಗಳೂರಿಗೆ 4 ಮತ್ತು 29 ಜಿಲ್ಲೆಗಳಿಗೆ ತಲಾ ಒಂದು ಸಂಚಾರಿ ಲ್ಯಾಬ್ ಅವಶ್ಯಕತೆ ಇದೆ. ಖಾಸಗಿ ಲ್ಯಾಬ್‍ಗಳಿಗೆ ಮಾನ್ಯತೆ ನೀಡುವ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕಿದೆ. ವಾರ್ಷಿಕ ಕ್ರಿಯಾ ಯೋಜನೆ ಅವಧಿಯನ್ನು ಕಡಿತಗೊಳಿಸುವ ಅವಶ್ಯಕತೆ ಇದೆ. ವಿಧಿ ವಿಜ್ಞಾನ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗಿದೆ ಎಂದು ಸಲಹೆಗಳನ್ನು ನೀಡಿ, ಇದಕ್ಕೆ ಕಾಲಮಿತಿ ಹಾಕಿಕೊಳ್ಳಬೇಕಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ನಗರ ಪೊಲೀಸ್ ಆಯುಕ್ತರ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಆಕ್ಷೇಪ
ಸರ್ಕಾರದ ಪರ ವಕೀಲ ವಿಜಯಕುಮಾರ್ ಪಾಟೀಲ್ ವಾದಿಸಿ, ಖಾಲಿ ಹುದ್ದೆಗಳ ಭರ್ತಿಯಲ್ಲಿ ತಕ್ಕ ಮಟ್ಟಿಗೆ ಪ್ರಗತಿ ಆಗಿದೆ. ಉಳಿದ ವಿಚಾರಗಳನ್ನು ಹಣಕಾಸಿನ ಇತಿಮಿತಿಯೊಳಗೆ ಪರಿಗಣಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಹುದ್ದೆಗಳು ಖಾಲಿ ಇದ್ದು, ಮೂಲಸೌಕರ್ಯ, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದರೆ ಪ್ರಯೋಗಾಲಯ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇದು ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾದಾನ ವಿಳಂಬಕ್ಕೆ ನೇರ ಕಾರಣವಾಗಲಿದೆ. ಆದ್ದರಿಂದ ಹುದ್ದೆಗಳ ಭರ್ತಿ, ಮೂಲಸೌಕರ್ಯ ಒದಗಿಸುವುದು ಮತ್ತು ಅಗತ್ಯ ಉಪಕರಣಗಳ ಖರೀದಿಗೆ ಕಾಲಮಿತಿ ಹಾಕಿಕೊಳ್ಳುವ ಬಗ್ಗೆ ಸರ್ಕಾರ ತಿಳಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಸಮಗ್ರ ನಿರ್ದೇಶನಗಳನ್ನು ನೀಡಲಿದೆ ಎಂದು ತಿಳಿಸಿ ವಿಚಾರಣೆಯನ್ನು ಜೂ.14ಕ್ಕೆ ಮುಂದೂಡಿತು.