ಬೆಂಗಳೂರು: ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಹಗೆದಾಳ ಗ್ರಾಮದ ಸ್ಮಶಾನ ಜಾಗದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ನಿರ್ಮಿಸುತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಹಗೆದಾಳ ಗ್ರಾಮದ ನಿವಾಸಿ ಶ್ರೀನಿವಾಸ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿ, ಸ್ಮಶಾನ ಜಾಗದಲ್ಲಿ ಪಶುವೈದ್ಯ ಚಿಕಿತ್ಸಾಲಯ ನಿರ್ಮಾಣ ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಹುಲಿಕಲ್ ಗ್ರಾ.ಪಂ ಪಿಡಿಒಗೆ ಸೂಚಿಸಿ 2020ರ ಮಾ.9 ರಂದು ಪತ್ರ ಬರೆಯಲಾಗಿದೆ ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಈವರಗೆ ನಿರ್ಮಿಸಿರುವ ಕಟ್ಟಡವನ್ನು ನಾಲ್ಕು ವಾರಗಳಲ್ಲಿ ತೆರವುಗೊಳಿಸಬೇಕು ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ:
ಕಾರಟಗಿ ತಾಲೂಕಿನ ಚೆಳ್ಳೂರು ಗ್ರಾಮಕ್ಕೆ ಮಂಜೂರಾದ ಪಶು ವೈದ್ಯ ಚಿಕಿತ್ಸಾಲಯವನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಯಾವುದೇ ಅನುಮತಿ ಪಡೆದುಕೊಳ್ಳದೇ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಗೆದಾಳ ಗ್ರಾಮದ ಸರ್ವೆ ನಂಬರ್ 71/13 ರಲ್ಲಿರುವ 22 ಗುಂಟೆ ರುದ್ರ ಭೂಮಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸುತ್ತಿದ್ದರು. ಈ ಜಮೀನು ನೂರಾರು ವರ್ಷಗಳಿಂದ ಗ್ರಾಮಸ್ಥರು ಸ್ಮಶಾನಕ್ಕಾಗಿ ಬಳಕೆ ಮಾಡುತ್ತಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.