ಬೆಂಗಳೂರು : ರೌಡಿ ಶೀಟ್‌ನಲ್ಲಿ ಫೈಟರ್ ರವಿ ಅಲಿಯಾಸ್ ಬಿ.ಎಂ.ಮಲ್ಲಿಕಾರ್ಜುನ ಹೆಸರನ್ನು ಮುಂದುವರೆಸುತ್ತಿರುವ ಪೊಲೀಸ್ ಇಲಾಖೆ ಕ್ರಮಕ್ಕೆ ಹೈಕೋರ್ಟ್ ತಡೆಯೊಡ್ಡಿದೆ. ತಮ್ಮ ಹೆಸರನ್ನು ರೌಡಿ ಶೀಟ್‌ನಿಂದ ತೆಗೆದುಹಾಕುವಂತೆ ಕೋರಿ ಪೊಲೀಸ್ ಇಲಾಖೆಗೆ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ಕ್ರಮವನ್ನು ಪ್ರಶ್ನಿಸಿ ರವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಫೈಟರ್ ರವಿ ವಿರುದ್ಧದ ರೌಡಿ ಶೀಟ್ಗೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಏಪ್ರಿಲ್ 5ರಂದು ಮತ್ತೆ ಹೈಕೋರ್ಟ್‌ಗೆ ತಕರಾರು ಅರ್ಜಿ: ಮಲ್ಲಿಕಾರ್ಜುನ ಹೆಸರನ್ನು ರೌಡಿ ಶೀಟ್‌ನಲ್ಲಿ ಸೇರಿಸಲಾಗಿತ್ತು. ಇದರಿಂದ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರೌಡಿಶೀಟ್‌ನಿಂದ ಮಲ್ಲಿಕಾರ್ಜುನ ಹೆಸರು ತೆಗೆಯುವ ಕುರಿತಾದ ಮನವಿ ಪರಿಗಣಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿತ್ತು. ಆದರೆ, ಮಲ್ಲಿಕಾಜುನ ಮನವಿಯನ್ನು ಪೊಲೀಸ್ ಇಲಾಖೆ 2020ರಲ್ಲಿ ತಿರಸ್ಕರಿಸಿತ್ತು. ಜತೆಗೆ, ಪ್ರತಿ ವರ್ಷ ರೌಡಿಶೀಟ್‌ನಲ್ಲಿ ಅವರ ಹೆಸರು ಮುಂದುವರಿಸಲಾಗಿತ್ತು. ಅದನ್ನು ಆಕ್ಷೇಪಿಸಿ ಇದೇ ಏಪ್ರಿಲ್ 5ರಂದು ಮತ್ತೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ತಮ್ಮ ವಿರುದ್ಧ ದಾಖಲಾಗಿದ್ದ ಆರು ಅಪರಾಧ ಪ್ರಕರಣಗಳನ್ನೂ ಹೈಕೋರ್ಟ್ ರದ್ದುಪಡಿಸಿದೆ. ಮತ್ತೊಂದು ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ. ಸದ್ಯ ತಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಲ್ಲಿಯೂ ಭಾಗಿಯಾಗಿಲ್ಲ. ಹೀಗಿದ್ದರೂ ಪ್ರತಿ ವರ್ಷ ರೌಡಿ ಶೀಟ್‌ನಲ್ಲಿ ತಮ್ಮ ಹೆಸರನ್ನು ಮುಂದುವರಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಫೈಟರ್ ರವಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ: ಫೈಟರ್ ರವಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಅಲೋಕ್ ಕುಮಾರ್