ಬೆಂಗಳೂರು: ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆಥಿರ್ಕ ನೆರವು ನೀಡುವ "ಕೇಂದ್ರ ವಲಯದ ಬಡ್ಡಿ ಸಹಾಯಧನ ಯೋಜನೆ' (ಸಿಎಸ್ಐಎಸ್)ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಸಿಎಸ್ಐಎಸ್ ಯೋಜನೆಯನ್ನು ರಾಜ್ಯದ ಎಲ್ಲಾ ವರ್ಗದ ವಿದ್ಯಾಥಿರ್ಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಡಾ. ರಾಮ ಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ಆಥಿರ್ಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 2009ರಲ್ಲಿ ಸಿಎಸ್ಐಎಸ್ ಯೋಜನೆ ಜಾರಿಗೆ ತರಲಾಗಿದೆ. ಅದರಂತೆ ವಾಷಿರ್ಕ 4.5 ಲಕ್ಷ ರೂಪಾಯಿ ಆದಾಯ ಹೊಂದಿರುವ ಪೋಷಕರ ಮಕ್ಕಳಿಗೆ ಗರಿಷ್ಠ 7.5 ಲಕ್ಷ ಶೈಕ್ಷಣಿಕ ಸಾಲ ಒದಗಿಸಲಾಗುತ್ತದೆ. 2018ರಲ್ಲಿ ಯೋಜನೆ ಪರಿಷ್ಕರಿಸಿ ನ್ಯಾಕ್, ಎನ್.ಬಿ.ಎ ಮಾನ್ಯತೆ ಪಡೆದ ಅಥವಾ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಗಳು, ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ವೃತ್ತಿಪರ ಹಾಗೂ ತಾಂತ್ರಿಕ ಕೋರ್ಸ್ಗಳನ್ನು ಕಲಿಯುವ ವಿದ್ಯಾಥಿರ್ಗಳಿಗೆ ಈ ಯೋಜನೆ ವಿಸ್ತರಿಸಲಾಗಿದೆ ಎಂದರು.
ಹೇಳಿಕೆ ಪರಿಗಣಿಸಿದ ಪೀಠ, ಅಥಿರ್ಕವಾಗಿ ಹಿಂದುಳಿದ ಅಥವಾ ಬಡತನ ಹಿನ್ನೆಲೆಯ ಯಾವೊಬ್ಬ ವಿದ್ಯಾರ್ಥಿಯೂ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಆ ರೀತಿಯಲ್ಲಿ ಸಿಎಸ್ಐಎಸ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.