ಬೆಂಗಳೂರು: ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಶಾಸಕ ಗೌರಿಶಂಕರ್ ಸ್ವಾಮಿ ಆಯ್ಕೆಯನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಗೌರಿಶಂಕರ್ ಸ್ವಾಮಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಲು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ.ಸುರೇಶ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಗುರುವಾರ ಈ ಆದೇಶ ಪ್ರಕಟಿಸಿದೆ.
ಅಲ್ಲದೆ, ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಗೌರಿ ಶಂಕರ್ ಅವರ ಮಧ್ಯಂತರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ತನ್ನ ಆದೇಶದ ಜಾರಿಯನ್ನು ಒಂದು ತಿಂಗಳು ಕಾಲ ಅಮಾನತ್ತಿನಲ್ಲಿಟ್ಟು ಆದೇಶ ನೀಡಿದೆ. ಅಲ್ಲದೆ, ಈ ಆದೇಶವು ಗೌರಿ ಶಂಕರ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಯಾವುದೇ ರೀತಿಯಲ್ಲಿ ಅಡ್ಡಿಯಾಗದು ಎಂದು ತಿಳಿಸಿದೆ. ಜತೆಗೆ, ಪ್ರಕರಣದಲ್ಲಿ ಇತರೆ ಪ್ರತಿವಾದಿಗಳಾದ ಬಾಲನೇತ್ರಯ್ಯ, ಅರೇಹಳ್ಳಿ ಮಂಜುನಾಥ್, ಕೃಷ್ಣೇಗೌಡ, ರೇಣುಕಮ್ಮ, ಸುನಂದಾ ಅವರು ಭ್ರಷ್ಟಾಚಾರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಆದರೆ, ಆದೇಶ ಅಮಾನತಿನಲ್ಲಿರಿಸಿರುವುದು ಗೌರಿ ಶಂಕರ್ ಅವರಿಗೆ ಮಾತ್ರ ಅನ್ವಯಿಸಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಇದೇ ವೇಳೆ ತಮ್ಮನ್ನೇ ಚುನಾಯಿತ ಅಭ್ಯರ್ಥಿಯಾಗಿ ಘೋಷಣೆ ಮಾಡುವಂತೆ ಅರ್ಜಿದಾರ ಸುರೇಶ್‌ಗೌಡರ ಮನವಿಗೆ ಸೂಕ್ತ ಆಧಾರ ಮತ್ತು ಸಕಾರಣಗಳು ಇಲ್ಲವಾಗಿದೆ ಎಂದು ತಿಳಿಸಿ, ಈ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ತೀರ್ಪು ಪ್ರಕಟಿಸುತ್ತಿದ್ದಂತೆ ಗೌರಿಶಂಕರ್ ಪರ ವಕೀಲ ಹೇಮಂತ್ ರಾಜ್ ಮಧ್ಯಂತರ ಅರ್ಜಿ ಸಲ್ಲಿಸಿ, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತದೆ. ಅಲ್ಲಿಯವರೆಗೆ ಈ ಆದೇಶ ಜಾರಿಗೆ ತಡೆಯಾಜ್ಞೆ ನೀಡಬೇಕು. ಚುನಾವಣಾ ಆಯೋಗ ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಆದ್ದರಿಂದ ಸದ್ಯ ಪ್ರಕಟಿಸಿರುವ ತೀರ್ಪಿಗೆ ತಡೆ ನೀಡುವ ಅಗತ್ಯವಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 116 (ಬಿ) ಅಡಿ ಆದೇಶವನ್ನು ತಡೆಹಿಡಿಯಲು ಹೈಕೋರ್ಟ್‌ಗೆ ಅಧಿಕಾರವಿದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ ಏನು ? 2018ರ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಡಿ.ಸಿ. ಗೌರಿ ಶಂಕರ್ ಸ್ವಾಮಿ ಅವರು ಜಯ ಸಾಧಿಸಿದ್ದರು. ಅವರು 82740 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಸುರೇಶ್ 77,100 ಮತಗಳನ್ನು ಪಡೆದು, 5640 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಂತರ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಸುರೇಶ್ ಗೌಡ, ಮತದಾರರಿಗೆ ಆಮಿಷವೊಡ್ಡಲು ಚುನಾವಣೆ ಸಂದರ್ಭದಲ್ಲಿ ಕೆಎಂಎಸ್‌ಎಸ್‌ಯಿಂದ ದಾಸರನಹಳ್ಳಿಯ ಶನಿದೇವರು ದೇವಸ್ಥಾನ ನವೀಕರಣಕ್ಕೆ ಐದು ಲಕ್ಷ ಹಣ ಪಾವತಿ ಮಾಡಲಾಗಿತ್ತು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೆಎಂಎಸ್‌ಎಸ್ ನಡೆಸುತ್ತಿರುವ ಎಂಜಿನಿಯರ್ ಕಾಲೇಜಿನಲ್ಲಿ ಉಚಿತ 1000 ಸೀಟುಗಳನ್ನು ಮತದಾರರ ಮಕ್ಕಳಿಗೆ ನೀಡುವುದಾಗಿ ಗೌರಿಶಂಕರ್ ಭರವಸೆ ನೀಡಿದ್ದರು ಎಂದು ಆರೋಪಿಸಿದ್ದರು.
ಜೆಡಿಎಸ್ ಪಕ್ಷದ ಕಾರ್ಯಕತರು ಹಾಗೂ ಗೌರಿ ಶಂಕರ್ ಬೆಂಬಲಿಗರು 2018 ರ ಏ.2ರಂದು ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಆಮಿಷವೊಡ್ಡುವ ನಿಟ್ಟಿನಲ್ಲಿ ಮೆಡಿ ಅಸಿಸ್ಟ್ ಕಾರ್ಡ್ (ವಿಮಾ ಪಾಲಿಸಿ) ವಿತರಿಸಿದ್ದರು. 2018 ರ ಮೇ 11 ರಂದು ಚುನಾವಣಾ ವಿಚಕ್ಷಣಾ ದಳವು ಸಿಬ್ಬಂದಿ ಗೂಳೂರು ಮತ್ತು ಹೆಬ್ಬರಿಗೆ ಭೇಟಿ ನೀಡಿದ ವೇಳೆ ಗೌರಿಶಂಕರ್ ಬೆಂಬಲಿಗರಿದ್ದ ಕಾರಿನಿಂದ ಮೆಡಿ ಅಸಿಸ್ಟ್ ಕಾರ್ಡ್‌ಗಳು, ಹಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದ್ದರಿಂದ ಗೌರಿಶಂಕರ್‌ರ ಆಯ್ಕೆಯನ್ನು ಅಸಿಂಧುಗೊಳಿಸಬೇಕು. ತಮ್ಮನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಸುರೇಶ್‌ಗೌಡ ತಮ್ಮ ಅರ್ಜಿಯಲ್ಲಿ ಕೋರಿದ್ದರು.
ಸಂಕಷ್ಟಕ್ಕೆ ಸಿಲುಕಿಸಿದ ವಿಮಾ ಪಾಲಿಸಿ: ಚುನಾವಣೆ ವೇಳೆ ಗೌರಿ ಶಂಕರ್ ಅವರು ಮತದಾರರ ಮಕ್ಕಳಿಗೆ ಮಾಡಿರುವ ವಿಮಾ ಪಾಲಿಸಿ ಹಂಚಿಕೆ ಮಾಡಿರುವುದು ದೊಡ್ಡ ಮುಳುವಾಯಿತು. ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದ ನ್ಯಾಯಪೀಠ, ಗೌರಿಶಂಕರ್ ಅವರ ತಂದೆ ಮತ್ತು ಕುಟುಂಬ ಸದಸ್ಯರು ನಿರ್ವಹಣೆ ಮಾಡುತ್ತಿರುವ ಕೊಮ್ಮಗೊಂಡನಹಳ್ಳಿ ಶ್ರೀ ಮಾರುತಿ ಸೇವಾ ಸಮಿತಿಯಿಂದ (ಕೆಎಂಎಸ್‌ಎಸ್) ಮತದಾರರ ಮಕ್ಕಳ ವೈದ್ಯಕೀಯ ವೆಚ್ಚವನ್ನು ಭರಿಸಲು ಮೆಡ್ ಅಸಿಸ್ಟ್ ಕಾರ್ಡ್ ಎಂಬ ಆರೋಗ್ಯ ವಿಮಾ ಪಾಲಿಸಿಯನ್ನು ಮಾಡಿಸಿತ್ತು.
ಕೆಎಂಎಸ್‌ಎಸ್ ಹೆಸರಿನಲ್ಲೇ ವಿಮಾ ಪಾಲಿಸಿ ಪಡೆದುಕೊಳ್ಳಲಾಗಿತ್ತು. ಗೌರಿಶಂಕರ್ ಪರವಾಗಿ ಅವುಗಳನ್ನು ಕೆಎಂಎಸ್‌ಎಸ್ ಮತದಾರರಿಗೆ ಹಂಚಿಕೆ ಮಾಡಿದೆ. ವಿಮಾ ಪಾಲಿಸಿ ವಿತರಣೆಯಿಂದ ಕೆಎಂಎಸ್‌ಎಸ್ ಅಂತರ ಕಾಯ್ದುಕೊಂಡಿಲ್ಲ. ಚುನಾವಣಾ ಅಕ್ರಮದಲ್ಲಿ ಕೆಎಂಎಸ್‌ಸ್ ಬಹುಮುಖ್ಯ ಪಾತ್ರವಹಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಬೋರಿಂಗ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಅಧ್ಯಕ್ಷರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಿರಾಕರಣೆ