ಬೆಂಗಳೂರು: ಪ್ರಥಮ ವರ್ತಮಾನ ವರದಿ(ಎಫ್ಐಆರ್) ಎಂದರೆ ಅದೇನು ವಿಶ್ವಕೋಶವಲ್ಲ. ಅಪರಾಧದ ಕುರಿತು ಎಫ್ಐಆರ್ನಲ್ಲೇ ಪ್ರತಿಯೊಂದನ್ನೂ ವಿವರಿಸಬೇಕೆಂದು ಬಯಸಲು ಸಾಧ್ಯವಿಲ್ಲ ಎಂದು ಕೊಲೆ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸುವ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಿರಣ್ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅರ್ಜುನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಥಮ ವರ್ತಮಾನ ವರದಿಯಲ್ಲಿ ಅಪರಾಧ ಕೃತ್ಯದ ಪ್ರತಿಯೊಂದು ವಿವರವೂ ಇರಬೇಕೆಂಬ ನಿಯಮವಿಲ್ಲ. ಅದು ವಿಶ್ವಕೋಶವಲ್ಲ. ಅಪರಾಧದ ಬಗ್ಗೆ ಮಾಹಿತಿ ಇದ್ದರೆ ಸಾಕು. ಪ್ರತ್ಯಕ್ಷ್ಯದರ್ಶಿಗಳು ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಆಧಾರದ ಮೇಲೆ ಎಫ್ಐಆರ್ ಅನ್ನು ಅನುಮಾನಿಸಲು ಸಾಧ್ಯವಿಲ್ಲ. ಪ್ರತ್ಯಕ್ಷ್ಯದರ್ಶಿಗಳನ್ನು ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ಕ್ರಾಸ್ ಎಕ್ಸಾಮಿನೇಷನ್ಗೆ ಒಳಪಡಿಸಲು ಅವಕಾಶವಿದೆ ಎಂದಿದೆ.
ಕಿರಣ್ ಕೊಲೆ ಪ್ರಕರಣದ ಆರೋಪಿ ಅರ್ಜುನ್, ಎಫ್ಐಆರ್ನಲ್ಲಿ ತನ್ನ ಹೆಸರು ಉಲ್ಲೇಖಿಸಿಲ್ಲ. ಮೃತನ ಸಹೋದರಿಯ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಎಂದು ಹೇಳಿಕೆ ನೀಡಿರುವ ವ್ಯಕ್ತಿಗಳು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಎಫ್ಐಆರ್ ನಂಬಲು ಅರ್ಹವಾಗಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದ. ಆತನ ವಾದ ತಿರಸ್ಕರಿಸಿದ ಹೈಕೋರ್ಟ್ ಜಾಮೀನಅನ್ನು ನಿರಾಕರಿಸಿದೆ.