ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯಿಂದ 10 ಕೋಟಿ ರೂಪಾಯಿ ದೇಣಿಗೆ ಪಡೆದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಅದರ ಚರಾಸ್ತಿ ಜಪ್ತಿ ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರ ಬರೆದ ಪತ್ರ ಪರಿಗಣಿಸುವ ಬಗ್ಗೆ ಹಾಗೂ ಹೂಡಿಕೆದಾರರ ಹಣದಿಂದ ಪಡೆದುಕೊಂಡ ದೇಣಿಗೆ ಮೊತ್ತವನ್ನು ಮರುಪಾವತಿಸುವ ಬಗ್ಗೆ ನಿಲುವು ತಿಳಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲ ವಿಜಯ ಕುಮಾರ್ ಪಾಟೀಲ್ ವಾದ ಮಂಡಿಸಿ, ಸಕ್ಷಮ ಪ್ರಾಧಿಕಾರದಲ್ಲಿ ಖಾಲಿ ಇದ್ದ ಎರಡು ಹುದ್ದೆಗಳ ಪೈಕಿ ಸಹಾಯಕ ಆಯುಕ್ತ ಹುದ್ದೆಯನ್ನು ಭರ್ತಿ ಮಾಡಲಾಗಿದ್ದು, ಜಂಟಿ ನಿರ್ದೇಶಕರ ಹುದ್ದೆ ಖಾಲಿ ಇದ್ದು ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೇ, ಐಎಂಎ ಸಂಸ್ಥೆಯಿಂದ 10 ಕೋಟಿ ರೂಪಾಯಿ ದೇಣಿಗೆ ಪಡೆದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಅದರ ಚರಾಸ್ತಿ ಜಪ್ತಿ ಮಾಡುವ ಸಂಬಂಧ ಸಕ್ಷಮ ಪ್ರಾಧಿಕಾರ ಬರೆದಿರುವ ಪತ್ರವನ್ನು ಪರಿಗಣಿಸುವ ಬಗ್ಗೆ ಹಾಗೂ ಹೂಡಿಕೆದಾರರ ಹಣದಿಂದ ಪಡೆದುಕೊಂಡ ದೇಣಿಗೆ ಮೊತ್ತವನ್ನು ಮರುಪಾವತಿಸುವ ವಿಚಾರವಾಗಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸಭೆ ನಡೆಸಿವೆ. ಈ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳಲು ಎರಡು ವಾರ ಕಾಲಾವಕಾಶ ಬೇಕು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಪೀಠ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
ಇದನ್ನೂ ಓದಿ: IMA ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್‌ಗೆ ಸೇರಿದ 16.81 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ