ಬೆಂಗಳೂರು: ನಗರದ ಕೋರಮಂಗಲದ ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ವಸತಿ ಸಮುಚ್ಛಯ ನಿರ್ಮಾಣಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನ ಎಸ್.ಮೀನಾ ಸೇರಿದಂತೆ 13 ಮಂದಿ ಹಾಗೂ ಕರ್ನಾಟಕ ಇಡಬ್ಲ್ಯೂಎಸ್ 1,512 ಸಂಘಟನೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದ್ದು, ಮುಂದಿನ ವಿಚಾರಣೆ ವೇಳೆ ಬಿಡಿಎ, ಬಿಬಿಎಂಪಿ ಮತ್ತು ವಸತಿ ಸಮುಚ್ಛಯ ನಿರ್ಮಾಣಕ್ಕೆ ಗುತ್ತಿಗೆ ಪಡೆದಿರುವ ಮೇವರಿಕ್ ಡೆವಲ್ಪರ್ಸ್ ಪ್ರತಿನಿಧಿಗಳು ಖುದ್ದು ಹಾಜರಿರಬೇಕು. ಜತೆಗೆ, ಇಡಬ್ಲ್ಯೂಎಸ್ ವಿತರಿಸಬೇಕಾದ 1,512 ಮನೆಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಫ್ಲೋರ್ ಅಸಸ್‌ಮೆಂಟ್ ರೇಶ್ಯೊ (ಎಫ್‌ಎಆರ್) ಹೆಚ್ಚಿಸಲು ಅನುಮತಿ ಕೋರಿ ಗುತ್ತಿಗೆದಾರ ಮೆವರಿಕ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಬರೆದಿರುವ ಸಂಹವನ ಪತ್ರದ ಕುರಿತು ಕೈಗೊಂಡ ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ಪೀಠ ಸೂಚನೆ ನೀಡಿತು.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಆದೇಶದ ನಡುವೆಯೂ ಮನೆಗಳ ನಿರ್ಮಾಣ ಕಾಮಗಾರಿ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಬಿಬಿಎಂಪಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಲಹೆ, ಮಾರ್ಗದರ್ಶನ ಕೋರಲಾಗಿದೆ. ಈ ಸಂಬಂಧ 2022ರ ಡಿಸೆಂಬರ್ 20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸರ್ಕಾರದ ಪ್ರತಿಕ್ರಿಯೆಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ವಿವರಿಸಿದರು.
ಇದನ್ನೂ ಓದಿ: ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಕೋರಿ ಅರ್ಜಿ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಗುತ್ತಿಗೆದಾರರಾದ ಮೇವರಿಕ್ ಹೋಲ್ಡಿಂಗ್ಸ್ ಲಿಮಿಟೆಡ್ ಪ್ರತಿನಿಧಿಸಿದ್ದ ವಕೀಲ, ಇಡಬ್ಲ್ಯೂಎಸ್ಗೆ ಮೀಸಲಿಟ್ಟಿದ್ದ ಸ್ಥಳವನ್ನು ವಾಣಿಜ್ಯ ರೂಪದಲ್ಲಿ ಅಭಿವೃದ್ಧಿಪಡಿಸಲು ಸಂಬಂಧಿತ ಇಲಾಖೆಗಳು ಅನುಮತಿ ನೀಡದ ಹೊರತು, ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಮೇವರಿಕ್ ಸಂಸ್ಥೆಯು ಏಳು ಎಕರೆ ಪ್ರದೇಶದಲ್ಲಿ 1,512 ಇಡಬ್ಲ್ಯೂಎಸ್ ವಸತಿ ಸಮುಚ್ಛಯ ನಿರ್ಮಿಸಬೇಕಾಗಿದೆ ಎಂದು ತಿಳಿಸಿದರು. ವಿಳಂಬ ಧೋರಣೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಏಕ ಸದಸ್ಯ ಸಮಿತಿ ರಚಿಸುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಈ ವೇಳೆ ಬಿಬಿಎಂಪಿ ವಕೀಲರು ಮಧ್ಯಪ್ರವೇಶಕ್ಕೆ ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ವಾದವನ್ನು ಏಕಸದಸ್ಯ ಸಮಿತಿಯ ಮುಂದೆ ಮಂಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಈ ನಡುವೆ ಬಿಬಿಎಂಪಿ ಪರ ವಕೀಲರ ಮನವಿ ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆ ಮುಂದೂಡಿತು. ಮುಂದೆ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ವಿಚಾರಣೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಿ. ಕುಮಾರ್ ನಾಯಕ್, ಮೇವರಿಕ್ ಹೋಲ್ಡಿಂಗ್ಸ್ ಲಿಮಿಟೆಡ್ನ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಸರ್ಕಾರಿ ಜಮೀನು ಒತ್ತುವರಿ, ಕಟ್ಟಡ ನಿರ್ಮಾಣ.. ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ