ಬೆಂಗಳೂರು: ರಸ್ತೆ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ವೇಳೆ ಪರಿಸರ ಸಂರಕ್ಷಣೆ ಕಾಯ್ದೆಯನ್ನು ವಿದೇಶಿ ಪ್ರಭಾವಕ್ಕೆ ಒಳಗಾಗಿ ರೂಪಿಸಲಾಗಿದೆ ಎಂದು ಲಿಖಿತ ಹೇಳಿಕೆ ಸಲ್ಲಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ತನಿಖೆ ನಡೆಸುವಂತೆ ಪ್ರಾಧಿಕಾರದ ಅಧ್ಯಕ್ಷರಿಗೆ ನಿರ್ದೇಶಿಸಿದೆ.
ಪರಿಸರ ಪರಿಣಾಮ ಅಧ್ಯಯನಗಳನ್ನು ಬದಿಗಿಟ್ಟು ಕೆಲ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಣೆ ಮಾಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡೆಪ್ಯೂಟಿ ಜನರಲ್ ಮ್ಯಾನೇಜರ್ (ತಾಂತ್ರಿಕ) ಆರ್.ಬಿ.ಪೇಕಮ್ ಸಹಿ ಮಾಡಿದ್ದ ಲಿಖಿತ ಆಕ್ಷೇಪಣೆ ಗಮನಿಸಿದ ಪೀಠ, ಪ್ರಾಧಿಕಾರವನ್ನು ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಸಂಸತ್ತು, ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವ ವೇಳೆ ವಿದೇಶಿ ಪ್ರಭಾವಕ್ಕೆ ಒಳಗಾಗಿದೆ. ಇತ್ತೀಚೆಗೆ ಕೆಲ ಎನ್ಜಿಒಗಳು ವಿದೇಶಿ ಶಕ್ತಿಗಳಿಂದ ಹಣ ಪಡೆದು ರಾಷ್ಟ್ರ ಹಾಗೂ ಅಭಿವೃದ್ಧಿ ವಿರೋಧಿ ಕಾರ್ಯಗಳಲ್ಲಿ ತೊಡಗಿವೆ ಎಂದು ಹೇಳಿಕೆ ನೀಡಿದ್ದೀರಿ. ಯಾವ ಆಧಾರದಲ್ಲಿ ಈ ಹೇಳಿಕೆ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿತು. ಅಲ್ಲದೇ, ಇಂತಹ ಹೇಳಿಕೆಯನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಈ ಕುರಿತು ಪ್ರಾಧಿಕಾರದ ಅಧ್ಯಕ್ಷರು ತನಿಖೆ ನಡೆಸಿ, ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಇದರ ಜತೆಗೆ, ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸುವಾಗ ನಿಖರತೆ ಇರಬೇಕು. ಬಿಡು ಬೀಸಾಗಿ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿ, ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ಆಕ್ಷೇಪಣೆ ಹಿಂಪಡೆಯುುವುದಾಗಿ ಹೇಳಿ ಪದೇ ಪದೆ ಮನವಿ ಮಾಡಿದರು. ಆದರೆ, ನ್ಯಾಯಾಲಯ ಕೋರಿಕೆ ತಿರಸ್ಕರಿಸಿತಲ್ಲದೇ, ಹೇಳಿಕೆಯ ಹಿಂದಿನ ಉದ್ದೇಶವನ್ನು ತನಿಖೆ ಮಾಡಿ ಸ್ಪಷ್ಟಪಡಿಸುವವರೆಗೆ ಹಿಂಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು.