ಬೆಂಗಳೂರು : ಧಾರ್ಮಿಕ ಸೌಹಾರ್ದತೆ ಕದಡಿದ ಆರೋಪದಡಿ ಕೆಲವು ಸುದ್ದಿ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಪೊಲೀಸರಿಗೆ ಮನವಿ ಮಾಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪೊಲೀಸರಿಗೆ ಆರೋಪಿತ ಮಾಧ್ಯಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ಸಂಸ್ಥಾಪಕ ಆದರ್ಶ ಆರ್. ಅಯ್ಯರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ಕಲಾಪದ ವೇಳೆ ದೂರಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮೇ.14 ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರಾದ ಆದರ್ಶ ಆರ್. ಆಯ್ಯರ್ ಖುದ್ದು ವಾದ ಮಂಡಿಸಿ, ದೆಹಲಿಯ ನಿಜಾಮುದ್ದೀನ್ನಲ್ಲಿ ತಬ್ಲಿಗಿ ಜಮಾತ್ ನಡೆಸಿದ ಧಾರ್ಮಿಕ ಕಾರ್ಯಕ್ರಮದಿಂದಲೇ ಕೊರೊನಾ ವೈರಸ್ ಹರಡಿತು ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ದವು. ಈ ವೇಳೆ ಒಂದೇ ನಿರ್ದಿಷ್ಟ ಕೋಮಿನ ವಿರುದ್ಧ ಅಪಪ್ರಚಾರ ಮಾಡುವ ರೀತಿಯಲ್ಲಿ ಸುದ್ದಿ ಬಿತ್ತರಿಸಿದ್ದವು. ಹೀಗೆ ಧಾರ್ಮಿಕ ಸಾಮರಸ್ಯ ಕದಡಿದ ಒಂದಷ್ಟು ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹಾಗು ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಕೇಬಲ್ ಟೆಲಿವಿಷನ್ (ನಿಯಂತ್ರಣ) ಕಾಯ್ದೆ ಹಾಗು ವಿಪತ್ತು ನಿರ್ವಹಣಾ ಕಾಯ್ದೆಗಳ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವ ಪೊಲೀಸರಿಗೆ ಅಗತ್ಯ ನಿರ್ದೇಶನ ನೀಡಬೇಕು. ಧಾರ್ಮಿಕ ಸಾಮರಸ್ಯ ಕದಡುವಂತ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ದೂರು ದಾಖಲಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದರು. ವಾದ ಆಲಿಸಿದ ಪೀಠ ನೋಟಿಸ್ ಜಾರಿ ಮಾಡಲು ಆದೇಶಿಸಿತು.