ಬೆಂಗಳೂರು: ಮಲಗುಂಡಿ ಸ್ವಚ್ಛಗೊಳಿಸುವ ಅನಾಗರಿಕ ಪದ್ಧತಿ ತಡೆಗೆ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ಕೋರಿ, ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು)ನ ಕರ್ನಾಟಕ ಘಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ ಅವರ ವಾದ ಆಲಿಸಿದ ಪೀಠ, ಕೇಂದ್ರ ಒಳಚರಂಡಿ ಮತ್ತು ನೈರ್ಮಲ್ಯ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಸೇರಿದಂತೆ ಅರ್ಜಿಯಲ್ಲಿನ 14 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿತು.
ಅರ್ಜಿದಾರರ ಮನವಿ: ಮನುಷ್ಯರನ್ನು ನೇರವಾಗಿ ಮಲಗುಂಡಿ ಸ್ವಚ್ಛಗೊಳಿಸಲು ಬಳಸಿಕೊಳ್ಳುವುದನ್ನು ಹಾಗೂ ಮಲ ಹೊರುವ ಪದ್ಧತಿಯನ್ನು ಈಗಾಗಲೇ ನಿಷೇಧಿಸಲಾಗಿದೆ. ಈ ಅನಾಗರಿಕ ಪದ್ದತಿಯನ್ನು ನಿಷೇಧಿಸಿ, ಜಾರಿಗೆ ತಂದಿರುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಲವು ಆದೇಶ ನೀಡಿವೆ.
ಅಂತೆಯೇ 2009ರಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕೂಡ ಅನಿಷ್ಟ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಹಲವು ನಿರ್ದೇಶನ ನೀಡಿದೆ. ಹಾಗಿದ್ದರೂ, 2015ರಿಂದ ಈವರೆಗೆ ಮಲಗುಂಡಿ ಸ್ವಚ್ಛಗೊಳಿಸುವಾಗ ನಡೆದಿರುವ 22 ದುರ್ಘಟನೆಗಳಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದನ್ನು ಮಾಧ್ಯಮ ವರದಿಗಳು ಸ್ಪಷ್ಟಪಡಿಸುತ್ತಿವೆ.
ಅದರಲ್ಲೂ ಎಸ್ಸಿ ಸಮುದಾಯಕ್ಕೆ ಸೇರಿದವರನ್ನೇ ಇಂತಹ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮನುಷ್ಯರು ಮಲಗುಂಡಿ ಸ್ವಚ್ಛಗೊಳಿಸುವುದು, ವ್ಯಕ್ತಿ ಘನತೆಯಿಂದ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೆ, ಮಲಗುಂಡಿಯನ್ನು ಸ್ವಚ್ಛಗೊಳಿಸುವಾಗ ಪ್ರಾಣಕ್ಕೆ ಅಪಾಯವಿದ್ದು, ಅನೇಕ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಮನುಷ್ಯರು ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕು. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಯಲ್ಲಿ ಒಳ ಚರಂಡಿ ಸ್ವಚ್ಛಗೊಳಿಸಲು ಮನುಷ್ಯರ ಬದಲಿಗೆ ಯಂತ್ರೋಪಕರಣಗಳನ್ನು ಕಡ್ಡಾಯವಾಗಿ ಬಳಸಲು ಆದೇಶಿಸಬೇಕು. ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಪಾಲನೆಗೆ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.