ಬೆಂಗಳೂರು : ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಕೀಲರಾದ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಪೊಲೀಸ್ ಮಹಾ ನಿರ್ದೇಶಕ, ನಗರ ಪೊಲೀಸ್ ಆಯುಕ್ತ, ಎಸ್‌ಐಟಿ, ಕಬ್ಬನ್‌ಪಾರ್ಕ್ ಹಾಗೂ ಸದಾಶಿವನಗರ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು.
ಅಲ್ಲದೇ, ಮೊದಲು ಎಸ್‌ಐಟಿ ಮಧ್ಯಂತರ ತನಿಖಾ ವರದಿ ಸಲ್ಲಿಸಲಿ. ಅದನ್ನು ಪರಿಶೀಲಿಸಿದ ನಂತರ ಅರ್ಜಿಯಲ್ಲಿ ಮತ್ತೊಬ್ಬ ಪ್ರತಿವಾದಿಯಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ಜಾರಿ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಜಿ ಆರ್ ಮೋಹನ್ ವಾದಿಸಿ, ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯು ಮಾಧ್ಯಮಗಳಿಗೆ ತನಿಖೆಯ ವಿವರಗಳನ್ನು ಸೋರಿಕೆ ಮಾಡುತ್ತಿದೆ.
ಸರ್ಕಾರದ ಗೆಜೆಟ್ ಆದೇಶವಿಲ್ಲದೆ ನಗರ ಪೊಲೀಸ್ ಆಯುಕ್ತರು ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿ, ಅದಕ್ಕೆ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಜತೆಗೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಅಪಹರಣ ಪ್ರಕರಣ.. ಗುರುನಾನಕ್ ಭವನದ ವಿಶೇಷ ನ್ಯಾಯಾಧೀಶರ ಮುಂದೆ ಸಿಡಿ ಸಂತ್ರಸ್ತೆ ಹೇಳಿಕೆ ದಾಖಲು