ಬೆಂಗಳೂರು: ರಾಮನಗರದ ಭೈರಮಂಗಲ ಜಲಾಶಯಕ್ಕೆ ವೃಷಭಾವತಿ ನದಿ ನೀರು ಸೇರುವುದನ್ನು ತಡೆಯಲು ರೂಪಿಸಿರುವ ತಿರುವು ಕಾಲುವೆ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ನೀರಿ) ಜೊತೆ ಸಮಾಲೋಚನೆ ನಡೆಸುವ ಕುರಿತು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವೃಷಭಾವತಿ ನದಿ ತಿರುವು ಯೋಜನೆಯನ್ನು ಪ್ರಶ್ನಿಸಿ ಯಲ್ಲಪ್ಪರೆಡ್ಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ನೀರಿಯನ್ನು ವೃಷಭಾವತಿ ನದಿ ಪುನಶ್ಚೇತನಕ್ಕಾಗಿಯೇ ನೇಮಕಗೊಳಿಸಲಾಗಿದೆ. ಹೀಗಾಗಿ ನೀರಿ ತಜ್ಞರ ಅಭಿಪ್ರಾಯ ಪಡೆಯದೆ ನದಿ ತಿರುವು ಯೋಜನೆ ಜಾರಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಅಲ್ಲದೆ ರಾಜ್ಯ ಸರ್ಕಾರ ಯೋಜನೆ ಜಾರಿಗೊಳಿಸುವ ಕುರಿತು ನೀರಿಯೊಂದಿಗೆ ಸಮಾಲೋಚನೆ ನಡೆಸುವ ಕುರಿತು ತನ್ನ ನಿಲುವು ತಿಳಿಸಬೇಕು ಎಂದು ನಿರ್ದೇಶಿಸಿತು. ಇದಕ್ಕೆ ಕಾವೇರಿ ನೀರಾವರಿ ನಿಗಮದ ಪರ ವಕೀಲರು ಆಕ್ಷೇಪಿಸಿ, ಇದು ಸಾಕಷ್ಟು ಹಳೆಯ ಯೋಜನೆ. ಕೊರೊನಾ ಕಾರಣಕ್ಕಾಗಿ ಜಾರಿಯಲ್ಲಿ ವಿಳಂಬವಾಗಿದೆ. ಯೋಜನೆ ರೂಪಿಸುವ ಮುನ್ನ ನಿವೃತ್ತ ಎಂಜಿನಿಯರ್ಗಳ ಜೊತೆ ಚರ್ಚಿಸಲಾಗಿದೆ ಎಂದರು.
ವಾದ ಒಪ್ಪದ ಪೀಠ, ವೃಷಭಾವತಿ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಹಾಗೂ ಪುನಶ್ಚೇತನಗೊಳಿಸುವ ಉದ್ದೇಶಕ್ಕಾಗಿ ಈಗಾಗಲೇ ನೀರಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸರ್ಕಾರ ಭೈರಮಂಗಲ ಜಲಾಶಯದ ಬಳಿ ಯೋಜನೆ ರೂಪಿಸಿರುವುದು ಕೂಡ ಕೆರೆಗೆ ಕಲುಷಿತ ನೀರು ಸೇರಬಾರದು ಎಂದಿದೆ. ಹೀಗಿದ್ದ ಮೇಲೆ ನೀರಿ ಜೊತೆ ಸಮಾಲೋಚಿಸುದು ಸೂಕ್ತ ಎಂದು ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿತು.