ಬೆಂಗಳೂರು: ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠ ಮತ್ತು ಶಿಕ್ಷಣ ಸಂಸ್ಥೆಗಳ ವಿಶೇಷ ಪವರ್ ಆಫ್ ಅಟಾರ್ನಿಯನ್ನು(ಎಸ್‌ಪಿಎ) ಮತ್ತೊಬ್ಬರಿಗೆ ವರ್ಗಾವಣೆ ಮಾಡಿ ಅದರ ಪ್ರತಿಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರಿಗೆ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಎಸ್‌ಪಿಎಯನ್ನು ಮತ್ತೊಬ್ಬರಿಗೆ ವರ್ಗಾವಣೆಗೆ ಮಾಡುವುದಕ್ಕೆ ಸ್ಪಷ್ಟನೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಎಸ್‌ಪಿಎ ವರ್ಗಾವಣೆಗೆ ಕೋರಿರುವ ಮನವಿಯನ್ನು ಅರ್ಜಿದಾರರು ಜೈಲು ಅಧೀಕ್ಷಕರಿಗೆ ಸಲ್ಲಿಸಬೇಕು. ಆ ಮನವಿಯನ್ನು ಜೈಲು ಅಧೀಕ್ಷಕರು ಪರಿಗಣಿಸಬೇಕು.
ಪವರ್ ಆಫ್ ಅಟಾರ್ನಿ ವರ್ಗಾವಣೆ ಮಾಡಿದ ನಂತರ ಆ ಕುರಿತ ದಾಖಲೆಗಳನ್ನು ಪೋಕ್ಸೋ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.
ಮುರುಘಾ ಮಠದ ವಿದ್ಯಾಪೀಠ ಸಂಸ್ಥೆಗಳ ಉದ್ಯೋಗಿ ಹಾಗೂ ಸಿಬ್ಬಂದಿಗೆ ವೇತನ ನೀಡುವುದಕ್ಕಾಗಿ ಅ.3, 6 ಮತ್ತು 10 ರಂದು ಜೈಲಿನಿಂದಲೇ ಚೆಕ್‌ಗಳಿಗೆ ಸಹಿ ಹಾಕುವುದಕ್ಕೆ ಮುರುಘಾ ಶರಣರಿಗೆ ಹೈಕೋರ್ಟ್ ಅನುಮತಿ ನೀಡಿತ್ತು. ಅಲ್ಲದೇ, ಮುಂದಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಪವರ್ ಆಫ್ ಅಟಾರ್ನಿಯನ್ನು ವರ್ಗಾಯಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆ ಎಸ್‌ಪಿಎ ವರ್ಗಾವಣೆಗೆ ಮುರುಘಾ ಶರಣರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಓದಿ: ಮಠದ ಸಿಬ್ಬಂದಿ ವೇತನ ಚೆಕ್ಗೆ ಸಹಿ ಹಾಕಲು ಮುರುಘಾ ಶರಣರಿಗೆ ಹೈಕೋರ್ಟ್ ಅವಕಾಶ