ಬೆಂಗಳೂರು: ರಾಜ್ಯದ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪ್ರಸಕ್ತ ಸಾಲಿನ ವ್ಯತ್ಯಸ್ಥ ತುಟ್ಟಿಭತ್ಯೆ (ವಿಡಿಎ) ಮೊತ್ತ ಪಾವತಿಸುವುದನ್ನು ಮುಂದೂಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಎಐಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಹಾಗೂ ಕಾರ್ಮಿಕ ಸಂಘಟನೆಗಳು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಮಿಕ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಪರಿಣಾಮ, ಕೈಗಾರಿಕೆ, ಉದ್ದಿಮೆಗಳು ಸ್ಥಗಿತಗೊಂಡಿದ್ದವು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದಿದ್ದ ಉದ್ದಿಮೆಗಳು, ಕಾರ್ಮಿಕರಿಗೆ ವಿಡಿಎ ಪಾವತಿಸುವುದನ್ನು ಮುಂದೂಡುವಂತೆ ಮನವಿ ಮಾಡಿದ್ದವು. ಈ ಸಂಬಂಧ ಕಾರ್ಮಿಕ ಆಯುಕ್ತರು ಕಳೆದ ಮೇ 26ರಂದು ಕಾರ್ಮಿಕ ಸಂಘಟನೆಗಳು ಹಾಗೂ ಮಾಲೀಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಉಭಯ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದರು. ನಂತರ, ವಿಡಿಎ ಮೊತ್ತ ಪಾವತಿಸುವುದನ್ನು ಮುಂದೂಡುವ ಉದ್ದಿಮೆದಾರರ ಮನವಿ ಪರಿಗಣಿಸಬಹುದೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಪರಿಶೀಲಿಸಿದ್ದ ಕಾರ್ಮಿಕ ಇಲಾಖೆ ಜುಲೈ 20ರಂದು, 2021ರ ಮಾ.31ರವರೆಗೆ ಕಾರ್ಮಿಕರಿಗೆ ಪಾವತಿಸಬೇಕಿರುವ ವಿಡಿಎ ಮೊತ್ತವನ್ನು ಮುಂದೂಡಿ ಆದೇಶ ಹೊರಡಿಸಿತ್ತು.
ಇದೀಗ ವಿಡಿಎ ಪಾವತಿ ಮುಂದೂಡಿದ ಅಧಿಸೂಚನೆ ದೋಷಪೂರಿತ ಹಾಗೂ ಕಾನೂನುಬಾಹಿರ ಎಂದು ಆರೋಪಿಸಿರುವ ಅರ್ಜಿದಾರರು, ಸರ್ಕಾರದ ಕ್ರಮ ಕನಿಷ್ಠ ವೇತನ ಕಾಯ್ದೆಗೆ ವಿರುದ್ಧವಾಗಿದೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಉದ್ದಿಮೆಗಳು ಹಾಗೂ ಕೈಗಾರಿಕೆಗಳಿಗಾಗಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಹೀಗಿದ್ದರೂ, ಕಾರ್ಮಿಕ ಇಲಾಖೆ ವಿವೇಚನೆ ಬಳಸದೆ ವಿಡಿಎ ಪಾವತಿಯನ್ನು ಒಂದು ವರ್ಷ ಅವಧಿಗೆ ಮುಂದೂಡಿದ್ದು, ಲಕ್ಷಾಂತರ ಕಾರ್ಮಿಕರಿಗೆ ತೊಂದರೆಯಾಗಿದೆ. ಆದ್ದರಿಂದ, ಸರ್ಕಾರದ ಅದೇಶ ರದ್ದುಪಡಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.