ಬೆಂಗಳೂರು: ಪಬ್ ಮತ್ತು ಬಾರ್‌ಗಳ ಶಬ್ಧ ಮಾಲಿನ್ಯ ನಿಯಂತ್ರಣ ಕೋರಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಸರಿಯಾದ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ನ್ಯಾಯಾಲಯ ಬೇಸರ ಹೊರಹಾಕಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಕರಣದ ಕುರಿತು ಹೈಕೋರ್ಟ್ ಹೊರಡಿಸಿರುವ ಎಲ್ಲಾ ಆದೇಶಕ್ಕೆ ತಕ್ಕಂತೆ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕೆಂದು ಸೂಚಿಸಿದೆ. ಈ ಕುರಿತು ಇಂದಿರಾನಗರ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಇಂದಿರಾನಗರದಲ್ಲಿ ಅನಧಿಕೃತ ಪಬ್ ಹಾಗೂ ಬಾರ್‌ಗಳಿಂದ ಶಬ್ದಮಾಲಿನ್ಯ ಉಂಟಾಗಿರುವ ಪ್ರಕರಣ ಸಂಬಂಧ ಶಬ್ದಮಾಲಿನ್ಯ ಕುರಿತು ದೂರು ಬಂದಲ್ಲಿ, ಅದನ್ನು ದಾಖಲಿಸಲು ಓರ್ವ ಸಕ್ಷಮ ಅಧಿಕಾರಿಯನ್ನು ನೇಮಕ ಮಾಡುವಂತೆ ಸೂಚಿಸಿತ್ತು. ಆದರೆ, ಇಲ್ಲಿಯವರೆಗೆ ಸಕ್ಷಮ ಅಧಿಕಾರಿ ಯಾರೆಂಬುದರ ಬಗ್ಗೆಸರ್ಕಾರ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಏನಿದು ಪ್ರಕರಣ:
ಪಬ್ ಮತ್ತು ಬಾರ್‌ಗಳಿಂದ ತಡರಾತ್ರಿವರೆಗೂ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಇಂದಿರಾನಗರ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪೊಲೀಸರು ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕೆಲವು ಅನಧಿಕೃತ ಪಬ್ ಮತ್ತು ಬಾರ್‌ಗಳ ಬಾಗಿಲುಗಳನ್ನು ಮುಚ್ಚಿಸಿದ್ದರು.