ಬೆಂಗಳೂರು: ಹಿಂದಿನ ಮೈತ್ರಿ ಸರ್ಕಾರದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಶಿಫಾರಸ್ಸಿನಂತೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ 24ಜನ ಶಾಸಕರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ನಡೆಸಲಾಗಿದೆ ಎನ್ನಲಾದ ಪೊಲೀಸರ ವರ್ಗಾವಣೆ ವಿರುದ್ಧ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಂದು ನಡೆಯಿತು.
ಅರ್ಜಿದಾರರಾದ ಶಶಿಧರ್ ಅವರು ವಾದ ಮಂಡಿಸಿ ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ಶಿಫಾರಸ್ಸಿನಂತೆ ವರ್ಗಾವಣೆ ಮಾಡಿರುವುದು ಸಂವಿಧಾನ ಬಾಹಿರ ಕ್ರಮವಾಗಿದೆ. ಪೊಲೀಸರ ವರ್ಗಾವಣೆಯನ್ನ ಪೊಲೀಸ್ ಮಂಡಳಿಯ ತೀರ್ಮಾನದಂತೆ ವರ್ಗಾವಣೆ ನಡೆಯಬೇಕು. ಆದರೆ ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ವರ್ಗಾವಣೆ ಮಾಡಿರುವುದು ಸಂವಿಧಾನ ಬಾಹಿರವಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಿಂದಿನ ತೀರ್ಪಿನಲ್ಲಿ ಪೊಲೀಸ್ ಮಹಾಮಂಡಳಿಯ ತೀರ್ಮಾನದಂತೆ ವರ್ಗಾವಣೆ ನಡೆಯಬೇಕೆಂಬ ಸೂಚನೆ ಇದ್ದರೂ, ಅದನ್ನ ಪಾಲಿಸಲಾಗಿಲ್ಲ ಎಂದು ವಾದಿಸಿ ಈ ಅರ್ಜಿಗೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸಬೇಕು. ಹಾಗೂ ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ನಡೆದ ವರ್ಗಾವಣೆ ರದ್ದು ಪಡಿಸಬೇಕೆಂದು ಕೋರಿದ್ದಾರೆ.
ಈ ವೇಳೆ ಪ್ರತಿವಾದಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಕುರಿತು ನೋಟಿಸ್ ಜಾರಿ ಮಾಡಿದ ಹೈಕೋರ್ಟ್ ಸೆಪ್ಟಂಬರ್ 22 ರಂದು ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿದೆ.