ಬೆಂಗಳೂರು : ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಹಾಗೂ ಪಟ್ಟಣಗಳಿಗೆ ಕಾಲಮಿತಿಯೊಳಗೆ ಅಗತ್ಯ ಜಮೀನು ಮಂಜೂರು ಮಾಡುವಂತೆ ನ್ಯಾಯಾಲಯ ನೀಡಿದ್ದ ಆದೇಶದ ಪಾಲನೆಯಲ್ಲಿ ವಿಳಂಬ ಆಗಿರುವ ಹಿನ್ನೆಲೆ ವಿವರಣೆ ನೀಡಲು ನ.11ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಂಗಾಮಿ ಸಿಜೆ ಎಸ್ ಸಿ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ನ್ಯಾಯಾಲಯ ಆದೇಶ ನೀಡಿ ಎರಡು ವರ್ಷ ಆಗಿದೆ. ಆದರೆ, ಸರ್ಕಾರ ಈವರೆಗೆ ಆದೇಶ ಪಾಲನೆ ಮಾಡಿಲ್ಲ. ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದೇ ಅನೇಕ ಗ್ರಾಮಗಳ ಜನರು ಕಷ್ಟಪಡುತ್ತಿದ್ದಾರೆ.
ಸಾಕಷ್ಟು ಸರ್ಕಾರಿ ಮತ್ತು ಗೋಮಾಳ ಜಮೀನು ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಿದರೆ ಸ್ಮಶಾನಕ್ಕೆ ಜಾಗ ಒದಗಿಸಲು ಸುಲಭವಾಗುತ್ತದೆ. ಆದರೆ, ಸರ್ಕಾರ ಮುಂದೂಡುತ್ತಲೇ ಬರುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಮುಂದಿನ ವಿಚಾರಣೆ ವೇಳೆ ಪ್ರಗತಿ ತೋರದಿದ್ದರೆ ಕ್ರಮ
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಾಲಯದ ಆದೇಶ ಪಾಲನೆ ಬಗ್ಗೆ 2021ರ ಆ.12ರಂದು ಮೆಮೋ ಸಲ್ಲಿಸಿದ್ದ ಸರ್ಕಾರ ಒಂದಿಷ್ಟು ಪ್ರಗತಿ ತೋರಿಸಿತ್ತು. ಮುಂದಿನ ವಿಚಾರಣೆ ವೇಳೆ ಗಣನೀಯ ಪ್ರಮಾಣದಲ್ಲಿ ಪ್ರಗತಿ ಆಗದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಆದರೆ, ಯಾವುದೇ ಪ್ರಗತಿ ಕಾಣುತ್ತಿಲ್ಲ. ಹಾಗಾಗಿ, ಪ್ರಧಾನ ಕಾರ್ಯದರ್ಶಿಯವರನ್ನು ನ್ಯಾಯಾಲಯಕ್ಕೆ ಕರೆಸದೇ ಬೇರೆ ದಾರಿಯಿಲ್ಲ ಎಂದು ಹೇಳಿದ ಪೀಠ, ನ.11ರಂದು ವಿಚಾರಣೆಗೆ ಖುದ್ದು ಹಾಜರಾಗಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಜಾಗ ಇಲ್ಲದ 6 ಸಾವಿರಕ್ಕೂ ಅಧಿಕ ಕಂದಾಯ ಗ್ರಾಮಗಳು, ಜನವಸತಿ ಪ್ರದೇಶಗಳು ಹಾಗೂ 218 ಪಟ್ಟಣ ಪ್ರದೇಶಗಳಲ್ಲಿ ಅಗತ್ಯ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೊಹಮ್ಮದ್ ಇಕ್ಬಾಲ್ ಹೈಕೋರ್ಟ್ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು 2019ರ ಆ.23ರಂದು ಇತ್ಯರ್ಥಪಡಿಸಿದ್ದ ಹೈಕೋರ್ಟ್, ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು 6 ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ನಿಗದಿತ ಸಮಯದಲ್ಲಿ ಆದೇಶ ಪಾಲನೆ ಆಗದ ಕಾರಣ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿದ್ದರು.