ಬೆಂಗಳೂರು: ಆಧುನಿಕ ಯುಗದಲ್ಲಿ 'ಕನ್ಸೂಮರ್ ಇಸ್ ದಿ ಕಿಂಗ್' ಎನ್ನುವ ಮಾತಿದೆ. ಆದರೆ ಅದು ನಿಜ ಜೀವನದಲ್ಲಿ ಎಷ್ಟರ ಮಟ್ಟಿಗೆ ಕಾರ್ಯಗತಗೊಂಡಿದೆ ಎನ್ನವ ಪ್ರಶ್ನೆ ಜನಸಾಮಾನ್ಯರಲ್ಲಿದೆ. ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ ಎನ್ನುವ ಕೊರಗು ಈ ಅಭದ್ರತೆಗೆ ಕಾರಣವಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್ ದೇವದಾಸ್ ಹೇಳಿದರು.
ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪಾ ಸಭಾಂಗಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ (ಕರ್ನಾಟಕ ಪ್ರಾಂತ) ವತಿಯಿಂದ ಸ್ವರ್ಣ ಜಯಂತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ಸೂಮರ್ ಪ್ರೊಟೆಕ್ಷನ್ ಆಕ್ಟ್ 1986 ರಲ್ಲಿ ಬಂದಿದ್ದರೂ ಅದು ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಇದರ ಕುರಿತು ಸದಾ ಗ್ರಾಹಕ ಪಂಚಾಯತ್ ಕ್ರಿಯಾಶೀಲ ಕೆಲಸವನ್ನು ಮಾಡುತ್ತಿದೆ. ಗ್ರಾಹಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು 1974 ರಿಂದಲೂ ಶ್ರದ್ಧಾಭಕ್ತಿಯಿಂದ ತನ್ನ ಸಾಮರ್ಥ್ಯವನ್ನು ಮೀರಿ ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಇಂತಹ ಸಂಘಟನೆಗಳ ಪ್ರಯತ್ನದಿಂದ ಕನಿಷ್ಠ ಪಕ್ಷ ಕನ್ಸೂಮರ್ ಪ್ರೊಟೆಕ್ಷನ್ ಆಕ್ಟ್ 1986 ರಲ್ಲಿ ಜಾರಿಯಾಗಿದೆ. ಆದರೆ ಅವರಿಗೆ ಸಿಗಬೇಕಾದ ಹಕ್ಕುಗಳು ದೊರೆಯಬೇಕಿತ್ತು. ಅವರ ಮೇಲಿನ ಶೋಷಣೆ ನಿಲ್ಲಬೇಕಿತ್ತು. ಹಲವರ ಪ್ರಯತ್ನದ ನಂತರವೂ ಆಗಿಲ್ಲದಿರುವುದು ವಿಪರ್ಯಾಸ. ಅದಕ್ಕೆ ಕಾರಣಗಳು ಹಲವು ಇವೆ. ಆದರೆ, ವಿಷಮ ಪರಿಸ್ಥಿತಿಯಲ್ಲಿ ಕೂಡ ಮುಂಚೂಣಿಯಲ್ಲಿ ನಿಂತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಆರ್ ದೇವದಾಸ್ ಅಭಿಪ್ರಾಯಪಟ್ಟರು.
ಹಿರಿಯ ವಕೀಲ ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ಗ್ರೀಸ್ ದೇಶದಲ್ಲಿ ಜೀವಿಸಿದ್ದ ಶ್ರೇಷ್ಠ ತತ್ವಜ್ಞಾನಿ ಸಾಕ್ರಟೀಸ್ ಪ್ರಕಾರ 'ಕಂಟೈನ್ಮೆಂಟ್ ಇಸ್ ಬಿಸಿನೆಸ್ ಆಫ್ ಲೈಫ್' ಎಂದಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ನಂತರದ 75 ವರ್ಷ ಮಿತವ್ಯಯದಿಂದ ಗ್ರಾಹಕೀಕರಣದತ್ತ ಬಂದು ನಿಂತಿದ್ದೇವೆ. ಈ ಹಿನ್ನೆಲೆಯಲ್ಲಿ ಗ್ರಾಹಕ ಪಂಚಾಯತ್ ಜನರ ಹಕ್ಕುಗಳನ್ನು ಮತ್ತು ಕರ್ತವ್ಯವನ್ನು ಸಮನಾಗಿ ತೆಗೆದುಕೊಂಡು ಹೋಗುತ್ತಾ ಸಮಾಜದಲ್ಲಿ ಬದಲಾವಣೆಯನ್ನು ತರಲು ಶ್ರಮಿಸುತ್ತಿದೆ ಎಂದು ಹೇಳಿದರು.
ಗ್ರಾಹಕೀಕರಣ ಐರೋಪ್ಯ ಸಂಸ್ಕೃತಿ ಎಂದು ಮೇಲ್ನೋಟ್ಟಕ್ಕೆ ಅನ್ನಿಸುತ್ತದೆ. ಇಲ್ಲಿ ಗ್ರಾಹಕರನ್ನು ಪುಸಲಾಯಿಸಿ, ಮೋಸ ಮತ್ತು ವಾಮ ಮಾರ್ಗದ ಮೂಲಕ ಅವರನ್ನು ಕೊಳ್ಳುಬಾಕ ಸಂಸ್ಕೃತಿಗೆ ದಬ್ಬಲಾಗುತ್ತಿದೆ. ಈಗಿನ ಜನಾಂಗದಲ್ಲಿ ಮುಖ್ಯವಾಗಿ ಮಾಲ್ ಸಂಸ್ಕೃತಿ ಮನೆಮಾಡುತ್ತಿದೆ. ಕೆಲ ಯುವಕರು ಯುವತಿಯರು ಶಾಪಿಂಗ್ ಮಾಡದಿದ್ದರೆ ನಿದ್ದೆ ಬರದ ಹಂತಕ್ಕೆ ತಲುಪಿದ್ದಾರೆ. ಬೇಕೋ ಬೇಡವೋ ಬೇಕಾಬಿಟ್ಟಿಯಾಗಿ ಕೊಂಡುಕೊಂಡು ತಮ್ಮನ್ನು ತಾವು ಆರ್ಥಿಕ ಅವನತಿಗೆ ತಲುಪುತ್ತಿದ್ದಾರೆ. ಆದರೆ, ಹಲವು ಪ್ರಕಲ್ಪಗಳ ಮೂಲಕ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಂತಹವರನ್ನು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದು ಕೊಂಡಾಡಿದರು.
ಇಷ್ಟು ವರ್ಷ ನಮ್ಮ ಸಂಘಟನೆಯ ಬೆಳವಣಿಗೆಗೆ ನಮ್ಮ ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ವಕೀಲರು ಬೆಂಬಲ ನೀಡಿದ್ದಾರೆ. ಇದಕ್ಕೆ ಚಿರಋಣಿಯಾಗಿದ್ದೇನೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಷ್ತ್ರೀಯ ಸಚಿವ್ ಅರುಣ್ ರಾವ್ ದೇಶಪಾಂಡೆ ನೆನೆದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಸಿ ಸೋಮಶೇಖರ್, ಕರ್ನಾಟಕ ಪ್ರಾಂತ್ಯದ ನರಸಿಂಹ ನಕ್ಷತ್ರಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಆರ್ಟಿಐ ಅರ್ಜಿದಾರರ ಮಾಹಿತಿ ಒದಗಿಸುವಂತೆ ಕೋರಿದ್ದ ಸುತ್ತೋಲೆ ಹಿಂಪಡೆದ ಸರ್ಕಾರ