ಬೆಂಗಳೂರು : ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿ ಚರ್ಚ್ಗೆ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸದ ಹಿನ್ನೆಲೆ ಅಸಮಾಧಾನಗೊಂಡಿರುವ ಹೈಕೋರ್ಟ್, ಈ ಸಂಬಂಧ ವಿವರಣೆ ನೀಡಲು ಮೈಸೂರು ನಗರ ಪಾಲಿಕೆ ಆಯುಕ್ತರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ರಸ್ತೆ ಒತ್ತುವರಿ ತೆರವು ಕೋರಿ ಮಾಜಿ ಕಾರ್ಪೊರೇಟರ್ ಶ್ರೀಕಂಠಮೂರ್ತಿ ಮತ್ತಿತರರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪೀಠ, ಅ.29ರಂದು ನೀಡಿದ್ದ ನಿರ್ದೇಶನದಂತೆ ಒತ್ತುವರಿ ತೆರವುಗೊಳಿಸದೇ ಇರುವುದಕ್ಕೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿ ವಿಚಾರಣೆಯನ್ನು 2022ರ ಜನವರಿಗೆ ಮುಂದೂಡಿತು.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು, ಹೈಕೋರ್ಟ್ ನಿರ್ದೇಶದನಂತೆ ರಸ್ತೆ ಒತ್ತುವರಿ ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಯಿತು.
ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದೆಂಬ ಕಾರಣದಿಂದ ಒತ್ತುವರಿ ತೆರವುಗೊಳಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತೆರವಿಗೆ ಅಡ್ಡಿಪಡಿಸಿದವರ ಮೇಲೆ ಎಫ್‌ಐಆರ್ ಏಕೆ ದಾಖಲಿಸಲಿಲ್ಲ ಎಂದಿತು.
ಚರ್ಚ್ ಪರ ವಕೀಲರು, ಪಾಲಿಕೆ ಅಧಿಕಾರಿಗಳು ಸ್ಥಳದ ಸರ್ವೇ ನಡೆಸಿಲ್ಲ. 2019ರಲ್ಲಿ ಕಂದಾಯ ಇಲಾಖೆ ನಡೆಸಿದ ಸರ್ವೇ ವರದಿಯನ್ನು ಸಲ್ಲಿಸಿ, ನ್ಯಾಯಾಲಯವನ್ನು ಹಾದಿ ತಪ್ಪಿಸಿದ್ದಾರೆ ಎಂದರು. ಪಾಲಿಕೆ ವಕೀಲರು, ಸರ್ವೇ ನಡೆಸಿ ವರದಿ ಸಲ್ಲಿಸಲಾಗಿದೆ. ಆ ವರದಿ ಆಧರಿಸಿಯೇ ರಸ್ತೆ ಒತ್ತುವರಿ ತೆರವಿಗೆ ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ ಎಂದರು.
ವಾದ ಆಲಿಸಿದ ಪೀಠ, ಆಯುಕ್ತರು ರಸ್ತೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಕಾನೂನು ಸುವ್ಯವಸ್ಥೆ ಕಾರಣ ನೀಡುತ್ತಿದ್ದೀರಿ. ಹೀಗಾಗಿ, ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಹಾಜರಾಗಿ, ಒತ್ತುವರಿ ತೆರವುಗೊಳಿಸದೇ ಇರುವುದಕ್ಕೆ ವಿವರಣೆ ನೀಡಬೇಕು. ಹಾಗೆಯೇ, ರಸ್ತೆ ಸರ್ವೇ ನಡೆಸಿರುವ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ನಿರ್ದೇಶಿಸಿತು.
ಓದಿ: ನಾವು ಭಿಕ್ಷೆ ಬೇಡಿ ಪಕ್ಷ ಕಟ್ಟಬೇಕು, ನಿಮ್ಮ ಹಾಗೇ ತಲೆ ಒಡೆದು ಅಲ್ಲ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ