ಬೆಂಗಳೂರು: ಕೋಲಾರದ ಬಂಗಾರಪೇಟೆಯಲ್ಲಿ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಕೋಲಾರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ಕೋಲಾರದ ಕೆ.ಸಿ ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ ವಾದ ಮಂಡಿಸಿ, ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅನಧಿೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ರಂಗಮಂದಿರ, ಸಿಎಂಸಿ ಕಚೇರಿ-ಕ್ಯಾಂಟೀನ್ಗಳನ್ನು ಕಟ್ಟಿದ್ದು, ಉದ್ಯಾನಕ್ಕೆ ವಾಯುವಿಹಾರಕ್ಕೆ ಬರುವ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ವಾದ ಆಲಿಸಿದ ಪೀಠ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಈ ಸಂಬಂಧ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿತು.
ಕೋಲಾರದ ಬಂಗಾರಪೇಟೆ ಪಟ್ಟಣದ ಸರ್ವೆ ನಂಬರ್ 141ರಲ್ಲಿ 5 ಎಕರೆ 15 ಗುಂಟೆ ಭೂಮಿಯನ್ನು ಉದ್ಯಾನಕ್ಕಾಗಿ ಸರ್ಕಾರ ಮೀಸಲಿಟ್ಟಿದೆ. ಈ ಪ್ರದೇಶದಲ್ಲಿ ಪುರಸಭೆ ಅನಧಿಕೃತವಾಗಿ ಕಚೇರಿ ಕಟ್ಟಡ, ಕ್ಯಾಂಟೀನ್, ರಂಗಮಂದಿರ ಮತ್ತಿತರೆ ಕಟ್ಟಡಗಳನ್ನು ನಿರ್ಮಿಸುತ್ತಿದೆ.
ಇದೇ ವೇಳೆ ಕೆಲ ಖಾಸಗಿ ವ್ಯಕ್ತಿಗಳು ಕೂಡ ಪಾರ್ಕ್ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಉದ್ಯಾನದ ಸ್ವರೂಪ ಹಾಳಾಗಿದೆ ಮತ್ತು ನಾಗರಿಕರ ವಾಯುವಿಹಾರಕ್ಕೆ ಸಮಸ್ಯೆಯಾಗಿದೆ. ಆದ್ದರಿಂದ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಿ ಉದ್ಯಾನವನ್ನು ಸಂರಕ್ಷಿಸಬೇಕು. ಕಟ್ಟಡಗಳ ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ: ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ ಸೃಷ್ಟಿಸಿಕೊಂಡು ದುಬೈಗೆ ಹಾರಿದವ ಜೈಲುಪಾಲು