ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಇಂದಿನಿಂದ(ಜ.5ರಿಂ) ಜ.14ರವರೆಗೆ ಅನ್ವಯವಾಗುವಂತೆ ಹೈಕೋರ್ಟ್ ಕಲಾಪಗಳಿಗೆ ಹೊಸ ಎಸ್ಒಪಿ ಜಾರಿ ಮಾಡಲಾಗಿದೆ.
ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ. ಹೊಸ ಮಾರ್ಗಸೂಚಿ ಅನ್ವಯ ಬೆಂಗಳೂರಿನ ಪ್ರಧಾನ ಪೀಠದ ಕಲಾಪಗಳು ಸಂಪೂರ್ಣವಾಗಿ ವರ್ಚುಯಲ್ ವ್ಯವಸ್ಥೆ ಮೂಲಕವೇ ನಡೆಯಲಿವೆ. ಕಲಬುರಗಿ ಹಾಗೂ ಧಾರವಾಡ ಪೀಠಗಳು ಆನ್ಲೈನ್ ಮತ್ತು ಫಿಸಿಕಲ್ ಎರಡೂ ಮಾದರಿಯಲ್ಲಿ ನಡೆಯಲಿವೆ. ಆದರೆ, ಇಲ್ಲಿ ಕೂಡ ಪಾರ್ಟಿ - ಇನ್ - ಪರ್ಸನ್ಗಳು ಆನ್ಲೈನ್ ಮೂಲಕವೇ ಭಾಗಿಯಾಗುವಂತೆ ಸೂಚಿಸಲಾಗಿದೆ.
ಎಸ್ಒಪಿಯ ಪ್ರಮುಖ ಅಂಶಗಳು
- ನ್ಯಾಯಾಲಯದ ಆದೇಶವಿಲ್ಲದೇ ಪಾರ್ಟಿ-ಇನ್-ಪರ್ಸನ್ ಹಾಗೂ ಕಕ್ಷೀದಾರರಿಗೆ ಕೋರ್ಟ್ ಪ್ರವೇಶ ಇಲ್ಲ
- ವಕೀಲರು, ನ್ಯಾಯಾಲಯದ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ ಸೇರಿ ಕೋರ್ಟ್ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ ಎನ್-95 ಸೇರಿ ಡಬಲ್ ಮಾಸ್ಕ್ ಧರಿಸಬೇಕು. ನ್ಯಾಯಾಲಯದ ಸಿಬ್ಬಂದಿಗೆ ಗ್ಲೌಸ್ ಕಡ್ಡಾಯ
- ನ್ಯಾಯಾಲಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ. ತಾಪಮಾನ ಏರಿಕೆ ಇದ್ದಲ್ಲಿ ಅಥವಾ ಕೋವಿಡ್ ಲಕ್ಷಣಗಳಿದ್ದಲ್ಲಿ ಪ್ರವೇಶ ನಿಷಿದ್ಧ. ನ್ಯಾಯಾಲಯದ ಆವರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯ.
- ಇ-ಫೈಲಿಂಗ್ ಅಥವಾ ಫಿಸಿಕಲ್ ಫೈಲಿಂಗ್ ಮೂಲಕ ಪ್ರಕರಣಗಳನ್ನು ದಾಖಲಿಸಲು, ದಾಖಲೆಗಳನ್ನು ಸಲ್ಲಿಸಲು ಅವಕಾಶ.
- ಇ-ಫೈಲಿಂಗ್ ಮೂಲಕ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಮತ್ತು ವಕೀಲರು ಪ್ರತಿ ಪುಟದ ಮೇಲೆ ಸಹಿ ಮಾಡಿದ ನಂತರವೇ ಸ್ಕ್ಯಾನ್ ಮಾಡಿ ಕಳುಹಿಸಬೇಕು.
- ಕೋರ್ಟ್ ಫೀ ಆನ್ಲೈನ್ ಮೂಲಕ ಸಲ್ಲಿಸುವುದು ಕಡ್ಡಾಯ.
- ತುರ್ತು ಪ್ರಕರಣಗಳಿದ್ದಲ್ಲಿ ಮೆಮೊ ಸಲ್ಲಿಸುವುದಿದ್ದರೂ ಆನ್ಲೈನ್ ಮೂಲಕವೇ ಸಲ್ಲಿಸಬೇಕು. ನೋಟರಿಯವರಿಗೆ ಕೋರ್ಟ್ನ ಪಾರ್ಕಿಂಗ್ನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ.
- ಕಚೇರಿ ಆಕ್ಷೇಪಣೆ ಸರಿಪಡಿಸಲು ಲಭ್ಯವಿದ್ದ ಅವಧಿಯಲ್ಲಿ ಕಡಿತ. ಸೋಮವಾರದಿಂದ ಶುಕ್ರವಾರದವರೆಗೆ 11ರಿಂದ 1.30 ಗಂಟೆ, ಶನಿವಾರದಂದು ಬೆಳಗ್ಗೆ 11 ಗಂಟೆಯಿಂದ 12.30ರ ವೇಳೆಗೆ ವಕೀಲರು 15ರಿಂದ 30 ನಿಮಿಷಗಳಲ್ಲಿ ಫೈಲ್ ಹಿಂದಿರುಗಿಸಬೇಕು.
- ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲಿರುವ ಕ್ಯಾಂಟೀನ್ ಸೇವೆ ರದ್ದು.
- ವಕೀಲರ ಸಂಘಗಳ ಸಭಾಂಗಣಗಳನ್ನು ಬಳಕೆ ಮಾಡುವಂತಿಲ್ಲ.
- ಸರ್ಕಾರಿ ವಕೀಲರು ಕೂಡ ಆನ್ಲೈನ್ ಮೂಲಕವೇ ಕಲಾಪದಲ್ಲಿ ಭಾಗಿಯಾಗಬೇಕು.
- ಮುಂದಿನ ಆದೇಶದವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ವಿಚಾರಣಾ ನ್ಯಾಯಾಲಯಗಳಿಗೂ ಈ ಹಿಂದಿನ ಮಾರ್ಗಸೂಚಿಗಳು ಅನ್ವಯ.
ಇದನ್ನೂ ಓಸಿ: ಮಾಲ್, ಸಿನಿಮಾ ಮಂದಿರಕ್ಕೆ ಶೇ.50ರಷ್ಟು ಮಿತಿ... ಸರ್ಕಾರದ ಕೈಗೊಂಡ ಕ್ರಮಗಳ ವಿವರ ಇಲ್ಲಿದೆ