ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಮಳೆ ನೀರು ಕಾಲುವೆ ಸಮರ್ಪಕ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಇತರೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜಕಾಲುವೆ ಜಾಗ/ಮಳೆನೀರು ಕಾಲುವೆ ಒತ್ತುವರಿ ಹಿನ್ನೆಲೆಯಲ್ಲಿ ತಮ್ಮ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸುವ ಕುರಿತು ಬಿಬಿಎಂಪಿ ಜಾರಿಗೊಳಿಸಿರುವ ಶೋಕಾಸ್ ನೋಟಿಸ್ ಹಾಗೂ ಭೂ ಸ್ವಾಧೀನಾನುಭವ ಪತ್ರ ಕೋರಿ ಸಲ್ಲಿಸಿದ ಅರ್ಜಿ ಪರಿಗಣಿಸದ್ದನ್ನು ಪ್ರಶ್ನಿಸಿ ‘ಡಿ-ಮಾರ್ಟ್’ ನಡೆಸುತ್ತಿರುವ ಅವೆನ್ಯೂ ಸೂಪರ್ ಮಾರ್ಟ್ ಲಿಮಿಟೆಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಮಳೆನೀರು ಕಾಲುವೆ ಅಸಮರ್ಪಕ ನಿರ್ವಹಣೆಯು ದೀರ್ಘಕಾಲಿಕ ಸಮಸ್ಯೆಯಾಗಿದೆ. ಮಳೆ ನೀರು ಕಾಲುವೆಯ ನಿರ್ವಹಣೆಯ ಮೇಲ್ವಿಚಾರಣೆಗೆ ಸೂಕ್ತ ವ್ಯವಸ್ಥೆ ಅಗತ್ಯ. ಅದಕ್ಕಾಗಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡಬೇಕಿದೆ. ಆ ಸಮಿತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗಳ ಪ್ರಧಾನ ಪ್ರಧಾನ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳಿರಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಪೀಠ ಆದೇಶಿಸಿದೆ.
ಬಿಬಿಎಂಪಿಯು ನಡೆಸಿದ ಜಲ ವಿಜ್ಞಾನದ (ಹೈಡ್ರೋಲಾಜಿಕಲ್ ಸರ್ವೇ) ಸಮೀಕ್ಷೆಯ ಆಧಾರದ ಮೇಲೆ ನಗರದಲ್ಲಿ ಯಾವುದೇ ಹೊಸ ಮಳೆ ನೀರು ಕಾಲುವೆ ನಿರ್ಮಿಸುವ ಅಗತ್ಯತೆ ಎದುರಾದಾಗ ರಾಜ್ಯ ಸರ್ಕಾರದ ಮೂಲಕ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮತ್ತು ನಾಗರಿಕರ ಅನುಕೂಲಕ್ಕಾಗಿ ಮಳೆನೀರು ಕಾಲುವೆ ನಿಮಿಸುವ ಸಂದರ್ಭದಲ್ಲಿ ಈ ಸಮಿತಿಯ ಸಲಹೆ ಪಡೆಯಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಇದೇ ವೇಳೆ ಅರ್ಜಿದಾರರಿಗೆ ನೀಡಿರುವ ನೋಟಿಸ್ ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ನೀಡಲಾದ ನೋಟಿಸ್‌ಗಳು ''ಹದ್ದಿಗಿಡದ ಹಳ್ಳ''ಕ್ಕೆ ಸೇರಿದ (ರಾಜಕಾಲುವೆ) ಯಾವುದೇ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬುದನ್ನು ಉಲ್ಲೇಖಿಸಿಲ್ಲ. ಕೇವಲ ರಾಜಕಾಲುವೆ ಜಾಗ ಅತಿಕ್ರಮಿಸಲಾಗಿದೆಯೆಂದಷ್ಟೇ ಉಲ್ಲೇಖಿಸಲಾಗಿದೆ. ಹಾಗಾಗಿ, ಮಳೆನೀರು ಕಾಲುವೆಯ ಜಾಗವನ್ನು ಅತಿಕ್ರಮಣವನ್ನು ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರು ಕಟ್ಟಡ ನಿರ್ಮಿಸಿದ್ದರಿಂದ ಕಾಲುವೆಯಲ್ಲಿ ಹರಿವಿಗೆ ತಡೆಬಿದ್ದಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬಿಬಿಎಂಪಿಯ ವಾದ ತಿರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರು ಕಾನೂನು ಬಾಹಿರವಾಗಿ ನೀರಿನ ಹರಿವನ್ನು ನಿರ್ಬಂಧಿಸಿದ್ದರೆ, ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು. ಆದರೆ, ಪರಿಷ್ಕೃತ ಮಾಸ್ಟರ್ ಪ್ಲಾನ್ ಅಲ್ಲಿ ಯಾವುದೇ ನಾಲೆ, ರಾಜಕಾಲುವೆ ಮುಂತಾದವುಗಳನ್ನು ತೋರಿಸಿಲ್ಲ. ಇದರಿಂದ ನೀರಿನ ಹರಿವು ಅಡಚಣೆಗೆ ಅರ್ಜಿದಾರರು ಕಾರಣವೆಂದು ಹೇಳಲಾಗುವುದಿಲ್ಲ ಎಂದು ಪೀಠ ವಿವರಿಸಿದೆ.
ನೀರಿನ ಹರಿವು ಅಡಚಣೆಗೆ ನಿಜವಾದ ಕಾರಣ ತಿಳಿಯಲು ಬಿಬಿಎಂಪಿ ಪಯತ್ನಿಸಬೇಕು. ಅದಕ್ಕಾಗಿ ಬಿಬಿಎಂಪಿ ನಿರ್ಮಿಸಿರುವ ಕಾಲುವೆಗಳ ಸಾಮರ್ಥ್ಯ, ಕಾಲುವೆಯಲ್ಲಿನ ಹೂಳು, ರಾಜಕಾಲುವೆಗೆ ಸಂಬಂಧಿಸಿದ ಹೈಡ್ರೋಲಾಜಿಕ್ ಸಮೀಕ್ಷೆ ಸೇರಿದಂತೆ ಇನ್ನಿತರ ಕಾರಣಗಳನ್ನು ಶೋಧಿಸಬೇಕು. ವಿವಾದಿತ ಜಾಗದ ಸುತ್ತ ಮುತ್ತಲಿನ ಎಲ್ಲಾ ಮಳೆನೀರು ಕಾಲುವೆಗಳ ಸಮೀಕ್ಷೆ ನಡೆಸಬೇಕು ಎಂದು ಪೀಠ ನಿರ್ದೇಶಿಸಿದೆ.
ಅಂತಿಮವಾಗಿ, ಈ ಪ್ರಕರಣದಲ್ಲಿ ಅರ್ಜಿದಾರರ ಮೇಲೆ ಸಳ್ಳು ಆರೋಪ ಹೊರಿಸಲು ಬಿಬಿಎಂಪಿ ಪ್ರಯತ್ನಿಸುತ್ತಿರುವುದಾಗಿ ತೋರುತ್ತದೆ. ಹೀಗಾಗಿ ಸ್ವಾಧೀನಾನುಭವ ಪತ್ರ ಮಂಜೂರಾತಿರಾಗಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು. ಒಂದೊಮ್ಮೆ ಕಟ್ಟಡ ನಿರ್ಮಾಣದಲ್ಲಿ ಯಾವುದೇ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಸ್ವಾಧೀನಾನುಭವ ಪತ್ರ ತಿರಸ್ಕರಿಸುವ ಸ್ವಾತಂತ್ರ್ಯವನ್ನು ಬಿಬಿಎಂಪಿ ಹೊಂದಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಹದ್ದಿಗಿಡ ಹಳ್ಳದ 9 ಗುಂಟೆ ಜಾಗವನ್ನು ಅರ್ಜಿದಾರರು ಒತ್ತುವರಿ ಮಾಡಿ, ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದರಿಂದ ಮಳೆ ನೀರು ಹರಿವಿಗೆ ಅಡಚಣೆಯಾಗಿದೆ ಎಂದು ಬಿಬಿಎಂಪಿಯ ವಾದವಾಗಿತ್ತು. ಅರ್ಜಿದಾರರ ಪರ ವಕೀಲರು, ಪರಿಷ್ಕೃತ ಮಾಸ್ಟರ್ ಪ್ಲಾನ್ ಅಲ್ಲಿ ವಿವಾದಿತ ಜಾಗವನ್ನು ‘ರಾಜಕಾಲುವೆ’ ಎಂಬುದಾಗಿ ತೋರಿಸಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ವಿರುದ್ಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಅರ್ಜಿದಾರರು ಪ್ರತಿಪಾದಿಸಿದರು.
ಇದನ್ನೂ ಓದಿ: ಪಿಎಸ್ಐ ಹಗರಣ: ರುದ್ರಗೌಡ ಪಾಟೀಲ್ ಮನವಿ ತಿರಸ್ಕರಿಸಿದ ಹೈಕೋರ್ಟ್