ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡಗಳ ತೆರವಿಗೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.
ನಗರದಲ್ಲಿನ ಅಕ್ರಮ ಕಟ್ಟಡ ತೆರವಿಗೆ ಬಿಬಿಎಂಪಿಗೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಸರ್ಕಾರದ ಪರ ವಾದಿಸಿದ ವಕೀಲರು ಬಿಬಿಎಂಪಿ ವ್ಯಾಪ್ತಿಯಲ್ಲಿ 10 ರಿಂದ 15 ಸಾವಿರ ಅಕ್ರಮ ಕಟ್ಟಡಗಳು ಇವೆ. ಅರ್ಜಿದಾರರು ನೀಡಿರುವ ಮಾಹಿತಿ ಮೇರೆಗೆ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಪ್ರತಿ ವಾರ್ಡ್‌ಗಳ ಅಕ್ರಮ ಕಟ್ಟಡ ನಿರ್ಮಾಣದ ಮೇಲೆ ನಿಗಾ ಇಡಲು ವಿಚಕ್ಷಣ ಅಧಿಕಾರಿ ನೇಮಕ ಮಾಡಿ, ಹಾಗೆ ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕೈಗೊಂಡಿರುವ ಕ್ರಮದ ವರದಿಯನ್ನ ಮುಂದಿನ ವಿಚಾರಣೆ ವೇಳೆ ನೀಡಿ ಎಂದು ತಿಳಿಸಿ ವಿಚಾರಣೆ ಮುಂದೂಡಿಕೆ ಮಾಡಿದೆ.