ಬೆಂಗಳೂರು : ಪಾಲಿಕೆ ವಾರ್ಡ್ ಪುನರ್ ವಿಂಗಡಣೆ ವೇಳೆ ಎಲ್ಲ ವಾರ್ಡ್‌ಗಳಲ್ಲಿ ಸಮಾನ ಜನಸಂಖ್ಯೆ ಇರಬೇಕು ಎಂಬುದನ್ನು ಪ್ರತಿಪಾದಿಸುವ ನಿರ್ದಿಷ್ಟ ತೀರ್ಪುಗಳಿದ್ದರೆ ಮಾಹಿತಿ ಸಲ್ಲಿಸುವಂತೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ.
ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಮರು ವಿಂಗಡಣೆ ಮಾಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕರಾದ ಸೌಮ್ಯರೆಡ್ಡಿ ಮತ್ತು ಜಮೀರ್ ಅಹ್ಮದ್ ಖಾನ್ ಮತ್ತಿತರರು ಸಲ್ಲಿಸಿದ್ದ 14 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನ ಗೌಡರ್ ಅವರ ಪೀಠವು ಅರ್ಜಿದಾರರಿಗೆ ಈ ಸೂಚನೆ ನೀಡಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದೆ.
ವಾದ ಆಲಿಸಿ ನ್ಯಾಯಪೀಠ, ವಾರ್ಡ್‌ಗಳ ಪುನರ್ ರಚನೆ ಪ್ರಕ್ರಿಯೆಯಲ್ಲಿ ಗಂಭೀರ ಸಮಸ್ಯೆಯಿದ್ದರೆ ಮಾತ್ರ ಮಧ್ಯಪ್ರವೇಶಿಸಲಾಗುವುದು ಎಂದು ಮೌಖಿಕವಾಗಿ ಹೇಳಿದೆ. ಅಲ್ಲದೆ, ವಾರ್ಡ್ ಪುನರ್ ವಿಂಗಡಣೆ ಸಂಕೀರ್ಣ ಕೆಲಸ. ಬಹು ವಿಸ್ತಾರವಾದ ಪ್ರದೇಶಗಳನ್ನು ಹಲವು ವಿಷಯ ಮುಂದಿಟ್ಟುಕೊಂಡು ವಿಂಗಡಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಲಾಗಿರುತ್ತದೆ ಎಂದು ತಿಳಿಸಿತು.
ಸಣ್ಣಪುಟ್ಟ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಬೇಡಿ : ಎಲ್ಲಾ ವಾರ್ಡ್‌ಗಳನ್ನು ಸಮಾನವಾಗಿ ವಿಂಗಡಿಸಲು ಕಷ್ಟಸಾಧ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸುವುದು ಸಹಜ. ಹಾಗಾಗಿ, ಸಣ್ಣಪುಟ್ಟ ಲೋಪವಿದ್ದರೆ ನ್ಯಾಯಾಲಯ ಮಧ್ಯಪ್ರೇಶಿಸುವುದಿಲ್ಲ. ಗಂಭೀರ ಲೋಪಗಳು ಕಂಡುಬಂದರೆ ಮಾತ್ರ ಮಧ್ಯಪ್ರವೇಶಿಸಲಾಗುವುದು ಎಂದು ಸೆ.21ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಆಗ ಅರ್ಜಿದಾರರ ಪರ ವಕೀಲರು, ವಾರ್ಡ್ ಪುನರ್ ವಿಂಗಡಣೆ ವೇಳೆ ಎಲ್ಲಾ ವಾರ್ಡ್‌ಗಳಲ್ಲಿ ಸಮಾನ ಜನಸಂಖ್ಯೆ ಇರಬೇಕು ಎಂಬುದನ್ನು ಪ್ರತಿಪಾದಿಸುವ ನಿರ್ದಿಷ್ಟ ತೀರ್ಪುಗಳಿವೆ. ಅವುಗಳನ್ನು ಸಲ್ಲಿಸಿ ವಾದ ಮಂಡಿಸಲಾಗುವುದು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆ ಮನವಿ ಒಪ್ಪಿದ ನ್ಯಾಯಪೀಠ, ವಾರ್ಡ್ ಪುನರ್ ವಿಂಗಡಣೆ ವೇಳೆ ಎಲ್ಲಾ ವಾರ್ಡ್‌ಗಳಲ್ಲಿ ಸಮಾನ ಜನಸಂಖ್ಯೆ ಇರಬೇಕು ಎಂಬುದನ್ನು ಪ್ರತಿಪಾದಿಸುವ ನಿರ್ದಿಷ್ಟ ತೀರ್ಪುಗಳಿದ್ದರೆ ಸಲ್ಲಿಸಬಹುದು ಎಂದು ತಿಳಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.
ಸಮಿತಿಯ ವರದಿಯನ್ನು ಪರಿಗಣಿಸುವಂತಿಲ್ಲ ಎಂದು ವಾದ : ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಾರ್ಡ್ ಮರು ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿ ವರದಿ ನೀಡುವ ವೇಳೆ ಅದರ ಅವಧಿಯೇ ಮುಕ್ತಾಯಗೊಂಡಿತ್ತು. ಇದರಿಂದ ಸಮಿತಿಯ ವರದಿಯನ್ನು ಪರಿಗಣಿಸುವಂತೆಯೇ ಇಲ್ಲ. ಇನ್ನೂ ಆಡಳಿತ ಪಕ್ಷದ ಶಾಸಕರಿರುವ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಅನುಕೂಲವಾಗುವಂತೆ ವಾರ್ಡ್‌ಗಳ ಪುನರ್ ರಚಿಸಲಾಗಿದೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಹೆಚ್ಚಿನ ಜನಸಂಖ್ಯೆ ಪರಿಗಣಿಸಲಾಗಿದೆ ಮತ್ತು ವಾರ್ಡ್‌ಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಕುರಿತು ಮೌಖಿಕವಾಗಿ ತಿಳಿಸಿದರೆ ನ್ಯಾಯಾಲಯ ಪರಿಗಣಿಸಲಾಗುವುದಿಲ್ಲ. ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕಾಗುತ್ತದೆ. ಅದರಂತೆ ಸೂಕ್ತ ದಾಖಲಿಗಳಿದ್ದರೆ ಕೊಡಿ ಎಂದು ಸೂಚಿಸಿತು.
ಇದನ್ನೂ ಓದಿ : ಬಿಬಿಎಂಪಿ ವಾರ್ಡ್ಗಳಿಗೆ ಮೀಸಲಾತಿ ನಿಗದಿ : ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ