ಬೆಂಗಳೂರು: ಕೊರೊನಾ ಭೀತಿಯಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆ ಜಿಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಇ-ಫೈಲಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಬಳಕೆ ಮಾಡಿಕೊಳ್ಳಲು ಅನುಕೂಲ ಆಗುವಂತೆ ಹೈಕೋರ್ಟ್ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದು, ಆ ಪ್ರಕಾರ ವಕೀಲರು ಅಥವಾ ಪಾರ್ಟಿ ಇನ್ ಪರ್ಸನ್ ತಮ್ಮ ಅರ್ಜಿ, ಮೇಲ್ಮನವಿ ಅಥವಾ ದಾವೆಗಳನ್ನು ಹೂಡಲು ತಮ್ಮ ದಾಖಲೆಗಳನ್ನು ಪಿಡಿಎಫ್ ಮಾದರಿಯಲ್ಲಿ ಸ್ಕ್ಯಾನ್ ಮಾಡಿ ಇ-ಫೈಲಿಂಗ್ ಮಾಡಬಹುದಾಗಿದೆ. ಹಾಗೆಯೇ ಪ್ರತಿವಾದಿ ಒಂದು ವೇಳೆ ಸರ್ಕಾರ ಅಥವಾ ಸರ್ಕಾರದ ಪ್ರಾಧಿಕಾರವಾಗಿದ್ದರೆ ಅದನ್ನು ಪ್ರತಿನಿಧಿಸುವ ಸರ್ಕಾರಿ ಪ್ಲೀಡರ್ ಅಥವಾ ಸರ್ಕಾರಿ ಪ್ರಾಸಿಕ್ಯೂಟರ್ಗೆ ಇ-ಕೋರ್ಟ್ ವೆಬ್ಸೈಟ್ನಲ್ಲಿ ಇರುವ ಅವರ ಇ-ಮೇಲ್ ಐಡಿಗಳಿಗೆ ಕಳುಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ ಅರ್ಜಿ ಸಲ್ಲಿಸುವ ವೇಳೆ ಅದರ ತುರ್ತು ಏನು ಎಂಬುದನ್ನು ಚಿಕ್ಕದಾಗಿ ವಿವರಿಸಿರಬೇಕು. ಈ ಅರ್ಜಿಯನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಪರಿಶೀಲಿಸಿ, ತುರ್ತು ವಿಚಾರಣೆ ನಡೆಸುವ ಕುರಿತು ನಿರ್ಧರಿಸುತ್ತಾರೆ. ಒಂದು ವೇಳೆ ಅಗತ್ಯವಿದ್ದರೆ ಅರ್ಜಿ ವಿಚಾರಣೆಗೆ ದಿನಾಂಕ ಮತ್ತು ಸಮಯ ನಿಗದಿ ಮಾಡಿ ಪಾರ್ಟಿ ಇನ್ ಪರ್ಸನ್ ಅಥವಾ ವಕೀರಿಗೆ ಅವರ ರಿಜಿಸ್ಟರ್ಡ್ ಇ-ಮೇಲ್ಗೆ ಮಾಹಿತಿ ಕಳಿಸಲಾಗುತ್ತದೆ. ಅದೇ ರೀತಿ ವಕೀಲರಿಗೆ ವೀಡಿಯೋ ಕಾನ್ಫರೆನ್ಸ್ ಲಿಂಕ್ ಕಳುಹಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಈ ಸೇವೆಯನ್ನು ವಕೀಲರು ರಾಜ್ಯದ 30 ಜಿಲ್ಲೆಗಳಲ್ಲೂ ಬಳಸಿಕೊಳ್ಳಬಹುದಾಗಿದೆ.