ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ನಡೆಸಲು ಉದ್ದೇಶಿಸಿರುವ 37 ಕಿ.ಮೀ ರೋಡ್ ಶೋಗೆ ಹೈಕೋಟ್ ಗ್ರೀನ್ ಸಿಗ್ನಲ್ ನಿಡಿದೆ. ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯ್‌ಕುಮಾರ್ ಎಸ್.ಪಾಟೀಲ್ ಅವರಿದ್ದ ಅರ್ಜಿ ಇತ್ಯರ್ಥ ಪಡಿಸಿದೆ.
ಮೋದಿ ರೋಡ್ ಶೋಗೆ ಮೇ 6 ರಂದು ಬೆಳಗ್ಗೆ 9 ರಿಂದ 1.30ವರೆಗೆ ಮತ್ತು ಮೇ 7 ರಂದು ರಾಜ್ಯಾಧ್ಯಂತ ನೀಟ್ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೆಗೋಳ್ಳುವುದಕ್ಕಾಗಿ ಬೆಳಗ್ಗೆ 9 ರಿಂದ 11.30 ಕ್ಕೆ ಮಾತ್ರ ಅವಕಾಶ ನೀಡಿದೆ. ಅಲ್ಲದೇ, ಭಾರತದಲ್ಲಿ ಚುನಾವಣೆಗಳು ಹಬ್ಬದಂತೆ ನಡೆಯುತ್ತವೆ. ಮೊದಲ ಚುನಾವಣೆಯಿಂದಲೂ ರ‍್ಯಾಲಿಗಳು ನಡೆಯುವುದು ಸಾಮಾನ್ಯವಾಗಿದೆ.
ಪ್ರಸಕ್ತ ವರ್ಷ 2517 ರ‍್ಯಾಲಿಗಳು ನಡೆದಿವೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆ್ಯಂಬುಲೆನ್ಸ್, ಶಾಲಾ ಬಸ್‌ಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ರ‍್ಯಾಲಿಗಳಿಂದ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಲು ನೆರವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಸಂವಿಧಾನ ಪರಿಚ್ಛೇದ 19ರ ಪ್ರಕಾರ, ಶಾಂತಿಯುತವಾಗಿ ಚುನಾವಣೆ ಪ್ರಚಾರ ಮಾಡುವುದು, ಸಭೆ ಸೇರುವುದಕ್ಕೆ ಅವಕಾಶವಿದೆ. ಇದನ್ನು ಪರಿಗಣಿಸಿದ ನ್ಯಾಯಪೀಠ ರ‍್ಯಾಲಿಗೆ ಅನುಮತಿ ನೀಡಿತು. ಅಲ್ಲದೆ, ರ‍್ಯಾಲಿ ಸಂದರ್ಭದಲ್ಲಿ ಆಂಬ್ಯುಲೆನ್ಸ್, ಶಾಲಾ ಕಾಲೇಜು ಬಸ್ಸುಗಳ ಸಂಚಾರ, ವಿದ್ಯಾರ್ಥಿಗಳ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ, ರ‍್ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ ಎಂದು ಕೈಗೊಂಡಿರುವ ಸಂಬಂಧ ಪ್ರತಿವಾದಿಗಳಾದ ಚುನಾವಣಾ ಆಯೋಗ ಮತ್ತು ಪೊಲೀಸ್ ಆಯುಕ್ತರು ನ್ಯಾಯಪೀಠಕ್ಕೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರ‍್ಯಾಲಿ ನಡೆಸುವುದಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖುದ್ದು ಹಾಜರಾಗಿ, ರ‍್ಯಾಲಿ ನಡೆಸುವ ದಿನ ನೀಟ್ ಪರೀಕ್ಷೆ(ಭಾನುವಾರ) ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಕಂಟ್ರೋಲ್ ರೂಮ್‌ನಿಂದ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಅರ್ಜಿಯಲ್ಲಿ ಏನಿತ್ತು ?: ರಾಜ್ಯ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 37 ಕಿಲೋಮೀಟರ್ ರೋಡ್ ಶೋ ನಡೆಸುವುದಕ್ಕೆ ನೀಡಿರುವ ಅನುಮತಿ, ಸಂಚಾರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರ, ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು. ಜೊತೆಗೆ, ನಗರದಲ್ಲಿ ರೋಡ್ ಶೋ ನಡೆಸಲು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಅನುಮತಿ ನೀಡದಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಬೇಕು. ಅಲ್ಲದೆ, ರೋಡ್ ಶೋ ನಿರ್ಬಂಧ ಮತ್ತು ಫಲಿತಾಂಶ ಪ್ರಕಟವಾದ ಬಳಿಕ ವಿಜಯೋತ್ಸವ ನಡೆಸದಂತೆ ಸರ್ಕಾರ, ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಇದರಿಂದ ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಸಮಾಜಘಾತುಕ ಶಕ್ತಿಗಳಿಂದ ಅಹಿತಕರ ಘಟನೆಗೆ ಅವಕಾಶ ಇರುವುದಿಲ್ಲ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಈ ರ‍್ಯಾಲಿ ನಗರದ ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ರೋಡ್ ಶೋ ಆರಂಭವಾಗಲಿದ್ದು, 45 ವಿಧಾನಸಭಾ ಕ್ಷೇತ್ರಗಳನ್ನು ಇದು ಒಳಗೊಳ್ಳಿದೆ. ಸಂಜೆ 4 ಕ್ಕೆ ಮತ್ತೆ ರೋಡ್ ಶೋ ಆರಂಭವಾಗಲಿದ್ದು, 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನ ಪ್ರಮುಖ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಹಾದು ಹೋಗಲಿದ್ದು, ಇಲ್ಲಿ ಹಲವು ವಾಣಿಜ್ಯ ಮತ್ತು ಜನವಸತಿ ಪ್ರದೇಶಗಳು ಇವೆ. ರೋಡ್ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಸಂಸದ ಪಿ ಸಿ ಮೋಹನ್ ಹೇಳಿದ್ದಾರೆ.
ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಜನರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಉಂಟಾಗುವ ನಷ್ಟವನ್ನು ರಾಜಕೀಯ ಪಕ್ಷಗಳು ತುಂಬಿಕೊಡುವುದಿಲ್ಲ ಎಂದು ವಿವರಿಸಲಾಗಿದೆ. ಜೊತೆಗೆ, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಚೇರಿಗೆ ಹೋಗುವವರಿಗೆ ಭಾರಿ ಸಮಸ್ಯೆಯಾಗಲಿದೆ. ಹೀಗಾಗಿ ರೋಡ್ ಶೋ ನಿರ್ಬಂಧಿಸುವಂತೆ ಅವರು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ರೋಡ್ ಶೋ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ