ಬೆಂಗಳೂರು: 'ಸಮಾಜದಲ್ಲಿ ಘನತೆಯಿಂದ ಬದುಕಬೇಕಾಗಿದ್ದು, ಅತ್ಯಾಚಾರ ಎಸಗಿ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನೇ ಮದುವೆಯಾಗಲು ಬಯಸಿದ್ದೇನೆ. ಅದಕ್ಕೆ ಅವಕಾಶ ಕಲ್ಪಿಸಬೇಕು' ಎಂದು ಪೋಕ್ಸೋ ಪ್ರಕರಣದ ಸಂತ್ರಸ್ತೆಯ ಮನವಿ ಪರಿಗಣಿಸಿದ ಹೈಕೋರ್ಟ್, ಅಪರಾಧಿಯ ಶಿಕ್ಷೆ ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಪರಾಧಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿತ್ತು. ಈ ನಡುವೆ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಲು ತಾನು ಸಿದ್ಧನಿದ್ದು, ಜೀವಾವಧಿ ಶಿಕ್ಷೆ ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿದ್ದ. ಈ ಅರ್ಜಿಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತು. ಈ ವಿಚಾರಣೆ ವೇಳೆ ಸಂತ್ರಸ್ತೆಯೂ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ, ಅಪರಾಧಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಳು.
ಅರ್ಜಿದಾರ ತನ್ನ ಪ್ರಿಯಕರನೆಂದು ಸಂತ್ರಸ್ತೆಯೇ ಒಪ್ಪಿಕೊಂಡಿದ್ದಾಳೆ. ಸದ್ಯ ಆಕೆಗೆ 24 ವರ್ಷವಾಗಿದ್ದು, ಒಂದೊಮ್ಮೆ ಅರ್ಜಿದಾರನನ್ನು ವಿವಾಹವಾಗದಿದ್ದರೆ ತನ್ನ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದಾಳೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಆಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಅರ್ಜಿದಾರ 1 ಲಕ್ಷ ರೂಪಾಯಿ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಒದಗಿಸಬೇಕು. ಅರ್ಜಿದಾರ ಮತ್ತವನ ಪಾಲಕರು ಸಂತ್ರಸ್ತೆಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ, ಆಕೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಜಾಮೀನು ರದ್ಧತಿಗೆ ಕೋರಿ ಸಂತ್ರಸ್ತೆ ಅಥವಾ ಅವಳ ಪರವಾಗಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು? : 2017ರಲ್ಲಿ ಸಂತ್ರಸ್ತೆಯನ್ನು (ಘಟನೆ ನಡೆದಾಗ 17 ವರ್ಷ) ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪದಲ್ಲಿ ಅರ್ಜಿದಾರನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 363, 366, 376 (2) (ಎನ್) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ಸೆಕ್ಷನ್ 4 ಹಾಗೂ 6ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, 2019ರ ಮಾರ್ಚ್ 20ರಂದು ಅರ್ಜಿದಾರನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ವಿಚಾರಣೆ ವೇಳೆ ಅರ್ಜಿದಾರನ ಪರ ವಕೀಲರು ವಾದ ಮಂಡಿಸಿ, ಕಳೆದ 4 ವರ್ಷಗಳಿಂದ ಅರ್ಜಿದಾರ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸಂತ್ರಸ್ತೆಯನ್ನು ಮದುವೆಯಾಗಲು ಅರ್ಜಿದಾರನ ಪಾಲಕರೂ ಒಪ್ಪಿಗೆ ಸೂಚಿಸಿದ್ದಾರೆ. ಸಂತ್ರಸ್ತೆಗೆ ಈಗ 24 ವರ್ಷವಾಗಿದ್ದು, ಆಕೆಯೂ ಅವನನ್ನು ಮದುವೆಯಾಗಲು ಸಮ್ಮತಿಸಿದ್ದಾಳೆ. ವಾಸ್ತವದಲ್ಲಿ ಅರ್ಜಿದಾರ ಹಾಗೂ ಸಂತ್ರಸ್ತೆ ಒಂದೇ ಗ್ರಾಮದವರಾಗಿದ್ದಾರೆ. ಬಾಲ್ಯದಿಂದಲೂ ಪರಿಚಿತರಾಗಿರುವ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇದನ್ನು ನ್ಯಾಯಪೀಠ ಪುರಸ್ಕರಿಸಿ ಜಾಮೀನು ನೀಡಿದೆ.
ಇದನ್ನೂ ಓದಿ : ಉಮೇಶ್ ಪಾಲ್ ಹತ್ಯೆ ಪ್ರಕರಣ: ಆರೋಪಿ ಗುಡ್ಡು ಮುಸ್ಲಿಂ ಮನೆ ಧ್ವಂಸಗೊಳಿಸಲು ಪೊಲೀಸರಿಂದ ಸಿದ್ಧತೆ