ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರ ಮೇ ತಿಂಗಳ ಅವಧಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಅಕ್ರಮ ಕುರಿತು ತನಿಖೆ ನಡೆಸಲು ನಾಲ್ಕು ಸಮಿತಿ ರಚನೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತು. ಸರ್ಕಾರದ ಆದೇಶ ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸೇರಿದಂತೆ 17 ಗುತ್ತಿಗೆ ಕಂಪನಿಗಳು ಮತ್ತು 28 ಮಂದಿ ಗುತ್ತಿಗೆದಾರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಸಮಿತಿ ರಚನೆ ಮಾಡಿರುವ ಸರ್ಕಾರದ ನಿಲುವು ಕುರಿತಂತೆ ರಾಜ್ಯ ಸರ್ಕಾರ ಸಮರ್ಥನೆ ನೀಡಬೇಕಿದೆ. ಅದಕ್ಕಾಗಿ ತನಿಖಾ ಸಮಿತಿ ಮತ್ತು ಏಕವ್ಯಕ್ತಿ ತನಿಖಾ ಆಯೋಗ ರಚನೆ ಮಾಡಿರುವ ಸರ್ಕಾರದ ಆದೇಶ, ಅದಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 2019ರಿಂದ 2023ರ ಮೇ ತಿಂಗಳ ಅವಧಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಹಲವು ಕಾಮಗಾರಿಗಳು ನಡೆದಿದ್ದವು. ಕಾಮಗಾರಿಗಳ ಸಂಬಂಧ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್ ಪಾವತಿ, ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿರುವುದು ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಇದರಿಂದ ಆ ಕುರಿತು ತನಿಖೆ ನಡೆಸಲು ರಾಜ್ಯ ನಗರಾಭಿವೃದ್ಧಿ ಇಲಾಖೆಯು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ನಾಲ್ಕು ಸಮಿತಿ ರಚನೆ ಮಾಡಲಾಗಿತ್ತು.
ಇದನ್ನೂ ಓದಿ: ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ: ಹೈಕೋರ್ಟ್
ಉಜ್ವಲ್ ಕುಮಾರ್ ಘೋಷ್ ನೇತೃತ್ವದಲ್ಲಿ ನಾಲ್ವರು ಸದಸ್ಯರನ್ನು ಒಳಗೊಂಡ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ, ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಆರು ಸದಸ್ಯರನ್ನು ಒಳಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆಯ ಅಕ್ರಮ ತನಿಖಾ ಸಮಿತಿ, ಪಿ.ಸಿ. ಜಾಫರ್ ನೇತೃತ್ವದಲ್ಲಿ ನಾಲ್ವರು ಸದಸ್ಯರ ಬೃಹತ್ ನೀರುಗಾಲುವೆ, ಸ್ವಾಧೀನಾನುಭವ (ಒಸಿ) ನೀಡುವ ಅಕ್ರಮದ ತನಿಖಾ ಸಮಿತಿ ಮತ್ತು ಡಾ.ವಿಶಾಲ್ ನೇತೃತ್ವದಲ್ಲಿ ಆರು ಸದಸ್ಯರ ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿಗಳ ತನಿಖಾ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ನಕಲು ಆರೋಪ : ಕರ್ನಾಟಕ ಕಲರಿಯಪ್ಪಟ್ಟು ಅಸೋಸಿಯೇಷನ್ ನೋಂದಣಿ ರದ್ದು ಮಾಡಿದ ಹೈಕೋರ್ಟ್