ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ಪರಿಗಣನೆಗೆ ತೆಗೆದುಕೊಂಡಿರುವ ಹೈಕೋರ್ಟ್, ಕೌಟುಂಬಿಕ ಕಿರುಕುಳ ಆರೋಪದಡಿ ಬಂಧನ ಭೀತಿ ಎದುರಿಸುತ್ತಿದ್ದ ಒಂದೇ ಕುಟುಂಬದ ಆರು ಮಂದಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನ ಉಮೇಶ್ ಮತ್ತವರ ಐವರು ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ನಟರಾಜನ್ ಅವರಿದ್ದ ಪೀಠ, ಎಲ್ಲರಿಗೂ ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆರೋಪಿತರನ್ನು ಬಂಧಿಸಿದರೆ ತಲಾ 25 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ಪಡೆದು ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಚಿತ್ತೂರು ಮಹಿಳಾ ಠಾಣೆ ಪೊಲೀಸರಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಉಮೇಶ್ ಮತ್ತು ಆಂಧ್ರಪ್ರದೇಶದ ಚಿತ್ತೂರಿನ ಭವ್ಯ ವಿವಾಹದ ಬಳಿಕ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ನಡುವೆ ಭವ್ಯ ಆಂಧ್ರದ ಚಿತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉಮೇಶ್ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ವಾಟ್ಸಪ್ ಮೂಲಕ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಮೇಶ್ ಮತ್ತು ಕುಟುಂಬದವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಂಧ್ರಪ್ರದೇಶದ ಚಿತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವುದು ಸೂಕ್ತವಲ್ಲ. ಅರ್ಜಿದಾರರು ಕರ್ನಾಟಕದ ನಿವಾಸಿಗಳು, ಹಾಗೆಯೇ ಉಮೇಶ್ ತನ್ನ ಪತ್ನಿ ಭವ್ಯ ಜೊತೆ ದಾಂಪತ್ಯ ಮುಂದುವರೆಸಲು ಸಿದ್ಧವೆಂದು ಹೇಳಿದ್ದಾರೆ. ಇನ್ನು ಭವ್ಯ ತಂದೆ ಆಂಧ್ರಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು ತಮ್ಮ ಪ್ರಭಾವ ಬಳಸಿ ಕಿರುಕುಳ ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಅರ್ಜಿದಾರರಿಗೆ ಉಂಟಾಗಬಹುದಾದ ಕಿರುಕುಳ, ಅವಮಾನ ಮತ್ತು ನ್ಯಾಯಸಮ್ಮತವಲ್ಲದ ಬಂಧನ ತಡೆಯುವ ಉದ್ದೇಶದಿಂದ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.