ಬೆಂಗಳೂರು: ಇಬ್ಬರು ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಕೊಲ್ಲುವುದಾಗಿ ಬೆದರಿಸಿ ಪತ್ರ ಬರೆದಿದ್ದ 72 ವರ್ಷದ ವೃದ್ಧನ ಆರೋಗ್ಯ ಹಾಗೂ ವಯಸ್ಸನ್ನು ಪರಿಗಣಿಸಿರುವ ಹೈಕೋರ್ಟ್ ಪ್ರಕರಣದಲ್ಲಿ ಮುಂದುವರೆಯುವ ಮುನ್ನ ಕಾನೂನು ಸಲಹೆ ಪಡೆದುಕೊಳ್ಳುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳನ್ನು ಕೊಲ್ಲುವ ಬೆದರಿಕೆ ಒಡ್ಡಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದ ಬೆಂಗಳೂರಿನ ಜೆ.ಪಿ. ನಗರ ನಿವಾಸಿ ಎಸ್.ವಿ. ಶ್ರೀನಿವಾಸ ರಾವ್ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡಿದೆ.
ಈ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ಶ್ರೀನಿವಾಸ ರಾವ್, ಅರ್ಜಿಗೆ ಸಲ್ಲಿಸಿರುವ ಆಕ್ಷೇಪಣೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಮೂರ್ತಿಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಲ್ಲದೆ, ಆಕ್ಷೇಪಣೆಯಲ್ಲೂ 28 ಮಂದಿ ನ್ಯಾಯಮೂರ್ತಿಗಳು ಭ್ರಷ್ಟರು ಎಂದಿದ್ದೀರಿ. ಇದು ಸರಿಯೇ ಎಂದು ಪ್ರಶ್ನಿಸಿತು. ಪೀಠದ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ ರಾವ್ ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಸಿದ್ಧವಿದ್ದೇನೆ. ನನ್ನ ತಪ್ಪಿದ್ದರೆ ನೀವು ವಿಧಿಸುವ ಯಾವುದೇ ಶಿಕ್ಷೆ ಅನುಭವಿಸಲು ತಯಾರಿದ್ದೇನೆ ಎಂದರು.
ಆರೋಪಿ ವೃದ್ಧನ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಪೀಠ, ನಿಮಗೆ ವಯಸ್ಸಾಗಿದೆ ಹಾಗೂ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ನಿಮಗೆ ಕೊನೆಯದಾಗಿ ಒಂದು ಅವಕಾಶ ಕೊಡುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದುಕೊಳ್ಳಿ. ನಿಮ್ಮ ಆಕ್ಷೇಪಣೆಯನ್ನೇ ಸಮರ್ಥಿಸಿಕೊಳ್ಳುವುದಾದರೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಕಾನೂನು ಸಲಹೆ ಪಡೆದುಕೊಳ್ಳಿ ಎಂದು ಸೂಚಿಸಿತು.
ಅಂತಿಮವಾಗಿ ಶ್ರೀನಿವಾಸ ರಾವ್ ತಮ್ಮ ಆಕ್ಷೇಪಣೆಗಳಿಗೆ ಕಾನೂನು ಸಲಹೆ ಪಡೆದುಕೊಳ್ಳಲು ಒಪ್ಪಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 22 ರಂದು ಶ್ರೀನಿವಾಸ ರಾವ್ ವಿರುದ್ಧ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕಳೆದ ಜ.29ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದ ಎಸ್.ವಿ. ಶ್ರೀನಿವಾಸ್ ರಾವ್, ರಾಜ್ಯ ಹೈಕೋರ್ಟ್ನಲ್ಲಿ 28 ಭ್ರಷ್ಟ ನ್ಯಾಯಮೂರ್ತಿಗಳಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಹೈಕೋರ್ಟ್ನ ಓರ್ವ ನ್ಯಾಯಮೂರ್ತಿ, ಸುಪ್ರೀಂಕೋರ್ಟ್ನ ಒಬ್ಬರು ನ್ಯಾಯಮೂರ್ತಿ ಹಾಗೂ ಇಬ್ಬರು ನ್ಯಾಯವಾದಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಶ್ರೀನಿವಾಸರಾವ್ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. 2010ರಲ್ಲಿ ಶ್ರೀನಿವಾಸ ರಾವ್ ಇದೇ ರೀತಿ ಪತ್ರ ಬರೆದಿದ್ದರು. ಆದರೆ, ಕ್ಷಮೆ ಕೇಳಿದ್ದರಿಂದ ಹೈಕೋರ್ಟ್ ಪ್ರಕರಣ ಕೈಬಿಟ್ಟಿತ್ತು.
ಇದನ್ನೂ ಓದಿ: ಸಿಸಿಬಿಗೂ ಚಾರ್ಜ್ಶೀಟ್ ಸಲ್ಲಿಸುವ ಅಧಿಕಾರ ನೀಡಿದ ಸರ್ಕಾರ