ಬೆಂಗಳೂರು: ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಾಗರಿಕ ಮೂಲ ಸೌಕರ್ಯ ಬಳಕೆಗೆ ಮೀಸಲಿರಿಸಿದ್ದ (ಸಿ.ಎ) ಸೈಟ್ ಅನ್ನು ಬಡಾವಣೆಯ 8ನೇ ಬ್ಲಾಕ್ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಹಂಚಿಕೆ ಮಾಡಿದ ಬಿಡಿಎ ನಿರ್ಣಯವನ್ನು ಅಸಿಂಧುಗೊಳಿಸಿರುವ ಹೈಕೋರ್ಟ್, ಪ್ರಾಧಿಕಾರಕ್ಕೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿದ್ದ ಸಿಎ ಸೈಟನ್ನು ಬಡಾವಣೆಯ 8ನೇ ನಿವಾಸಿಗಳ ಸಂಘಕ್ಕೆ ಹಂಚಿಕೆ ಮಾಡಿದ್ದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ಪೀಠ, ಸಿ.ಎ ನಿವೇಶನ ಹಂಚಿಕೆ ಮಾಡಿದ್ದ ಬಿಡಿಎ ನಿರ್ಣಯವನ್ನು ರದ್ದುಗೊಳಿಸಿದೆ. ಅಲ್ಲದೇ, ಬಿಡಿಎ ಆಡಳಿತ ಮಂಡಳಿ ಹೈಕೋರ್ಟ್ನ ಹಿಂದಿನ ಆದೇಶವನ್ನು ಸರಿಯಾಗಿ ಪಾಲಿಸಿಲ್ಲ. ಬಿಡಿಎ ಕಾಯ್ದೆಯ ಸೆಕ್ಷನ್ 7ಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದೆ ಎಂದು ಅಭಿಪ್ರಾಯಪಟ್ಟು 25 ಸಾವಿರ ದಂಡ ವಿಧಿಸಿ ಆದೇಶಿಸಿದೆ.
2017ರಲ್ಲಿ ನಿವೇಶನ ಹಂಚಿಕೆ ಸಂಬಂಧ ಬಿಡಿಎ ಅರ್ಜಿ ಆಹ್ವಾನಿಸಿತ್ತು. ಆದರೆ, ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ 2018ರಲ್ಲಿ ಸಿಎ ಸೈಟ್ ಹಂಚಿಕೆ ವಿಚಾರವಾಗಿ ಕೆಲ ನಿರ್ದೇಶನಗಳನ್ನು ನೀಡಿತ್ತು. ಆದರೆ, ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಬಡಾವಣೆಯ ಮೂರನೇ ಬ್ಲಾಕ್ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಹೈಕೋರ್ಟ್ 2018ರ ಡಿಸೆಂಬರ್ 6ರಂದು ನಿವೇಶನವನ್ನು ಹಂಚಿಕೆ ಮಾಡಲು ಬಿಡಿಎ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಆದೇಶಿಸಿತ್ತು. 2018ರ ಡಿಸೆಂಬರ್ 15ರಂದು ಸಭೆ ನಡೆಸಿದ್ದ ಬಿಡಿಎ ಆಡಳಿತ ಮಂಡಳಿ, 6007 ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಪುನಃ 8ನೇ ಬ್ಲಾಕ್ ನಿವಾಸಿಗಳ ಹಿತರಕ್ಷಣಾ ಸಂಘಕ್ಕೆ ಹಂಚಿಕೆ ಮಾಡಿ ನಿರ್ಣಯ ಕೈಗೊಂಡಿತ್ತು. ಅದನ್ನು ಪ್ರಶ್ನಿಸಿ ಮೂರನೇ ಬ್ಲಾಕ್ ನಿವಾಸಿಗಳ ಹಿತರಕ್ಷಣಾ ಸಂಘ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ: ಸಿದ್ದರಾಮಯ್ಯ