ಬೆಂಗಳೂರು: ವಿಶ್ವವಿದ್ಯಾಲಯ ನಿಗದಿಪಡಿಸಿದ್ದ ದಿನಾಂಕ ಮುಗಿದ ನಂತರವೂ ವಿದ್ಯಾರ್ಥಿಯ ಪ್ರವೇಶಾತಿ ನಡೆಸಿದ ಮಂಗಳೂರು ಮೂಲದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮುಂದಿನ ವರ್ಷ ಒಂದು ಮ್ಯಾನೇಜ್‌ಮೆಂಟ್ ಕೋಟಾದ ಸೀಟ್ ಅನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ತಮ್ಮ ಪ್ರವೇಶವನ್ನು ಅನುಮೋದಿಸದ ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ಕಾಲೇಜಿನ ವಿದ್ಯಾರ್ಥಿ ಜೆ.ಕೆ.ಸುನಿಲ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಕಾಲೇಜು 5 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್)ಕ್ಕೆ ಕಾಲೇಜು ಪಾವತಿಸಬೇಕು. ಇನ್ನು ಮುಂದೆ ದಿನಾಂಕ ಮುಗಿದ ಬಳಿಕ ಯಾವುದೇ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು. ವಿಶ್ವವಿದ್ಯಾಲಯ ನಿಗದಿಪಡಿಸಿದ ಅವಧಿ ಮುಗಿದ ನಂತರವೂ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡರೆ, ಪ್ರತಿವಾದಿ ವಿಶ್ವವಿದ್ಯಾಲಯ ಆ ಬಗ್ಗೆ ತನಿಖೆ ನಡೆಸಲು ಸ್ವತಂತ್ರವಾಗಿದೆ. ಅಗತ್ಯಬಿದ್ದರೆ ವೈದ್ಯಕೀಯ ಕಾಲೇಜಿನ ಮಾನ್ಯತೆಯನ್ನೂ ಸಹ ಹಿಂಪಡೆಯಬಹುದು ಎಂದು ನ್ಯಾಯಪೀಠ ಎಚ್ಚರಿಸಿದೆ.
ಪ್ರಕರಣದಲ್ಲಿ ದಾಖಲೆಗಳನ್ನು ಗಮನಿಸಿದರೆ ಕಾಲೇಜು ನೀಡಿದ ಅವಧಿಯ ನಂತರ ವಿದ್ಯಾರ್ಥಿಯನ್ನು ಪ್ರವೇಶ ಮಾಡಿಕೊಂಡಿದೆ. ಆದರೆ ನಂತರ ವಿಶ್ವವಿದ್ಯಾಲಯವನ್ನು ದೂಷಿಸಿದೆ. ಅವಧಿ ಮುಗಿದ ನಂತರ ಕಾಲೇಜು ವಿದ್ಯಾರ್ಥಿ ಪ್ರವೇಶ ಮಾಡಿಕೊಂಡಿರುವುದರಿಂದ ಆ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿಲ್ಲ. ಹಾಗಾಗಿಯೇ ವಿವಿ ಅವರ ಪ್ರವೇಶವನ್ನು ಅನುಮೋದಿಸಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
100 ವಿದ್ಯಾರ್ಥಿಗಳ ಪ್ರವೇಶ ಪಟ್ಟಿಯನ್ನು ವಿವಿಗೆ ಕಳುಹಿಸಲಾಗಿತ್ತು ಎಂದು ಕಾಲೇಜು ಹೇಳುತ್ತಿದೆ. ಆದರೆ ದಾಖಲೆಗಳ ಪ್ರಕಾರ ಅರ್ಜಿದಾರ ವಿದ್ಯಾರ್ಥಿಯ ಪ್ರವೇಶ ದಾಖಲೆಗಳು ಅದರ ಭಾಗವಾಗಿಲ್ಲ. ಕಾಲೇಜಿನ ವಾದ ವಾಸ್ತವಿಕವಾಗಿ ಸತ್ಯಕ್ಕೆ ದೂರವಾದ ಸಂಗತಿ ಮತ್ತು ದಾಖಲೆಗಳಲ್ಲಿ ವೈರುಧ್ಯಗಳಿರುವುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ನ್ಯಾಯಪೀಠ ತಿಳಿಸಿತು.
ಕಾಲೇಜು ಪದೇ ಪದೇ ಇದೇ ರೀತಿ ನಡೆದುಕೊಳ್ಳುತ್ತಿದೆ ಎಂಬುದು ದಾಖಲೆಗಳಲ್ಲಿ ಗೊತ್ತಾಗುತ್ತದೆ. ಕಾಲೇಜು ನಿಗದಿತ ಅವಧಿಯ ನಂತರವೂ ಸೀಟುಗಳು ಖಾಲಿ ಇದ್ದರೆ ಅದಕ್ಕೆ ಕೊನೆಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡು ಅನುಮೋದನೆಗೆ ಕಳುಹಿಸಿ ಅವಧಿಯೊಳಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದೆ. ಇದು ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಕ್ಕೆ ಸಂಪೂರ್ಣ ತದ್ವಿರುದ್ಧ. ಹೀಗಾಗಿ ದಂಡ ವಿಧಿಸುತ್ತಿರುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತು.
ಇದನ್ನೂ ಓದಿ: ತಾಯಿಯ ಜೀವನ ನಿರ್ವಹಣೆಗೆ ವೆಚ್ಚ ನೀಡುವಂತೆ ಡಿಸಿ ಆದೇಶ ಪ್ರಶ್ನಿಸಿ ಅರ್ಜಿ: ಇಬ್ಬರು ಪುತ್ರರಿಗೆ 5 ಸಾವಿರ ರೂ. ದಂಡ