ಬೆಂಗಳೂರು: ಮಾಲ್ ಆಫ್ ಏಷ್ಯಾದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ಜನವರಿ 5ರ ವರೆಗೆ ವಿಸ್ತರಣೆ ಮಾಡಿದೆ.
ಡಿಸೆಂಬರ್ 31 ಮತ್ತು ಜನವರಿ 15 ರ ನಡುವೆ ಮಾಲ್‌ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಎಂದು ನಗರ ಪೊಲೀಸ್ ಆಯುಕ್ತರು ನೀಡಿದ್ದ ಆದೇಶ ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಲಿ.(ಫೀನಿಕ್ಸ್ ಮಾಲ್ ಆಫ್ ಏಷ್ಯಾ) ಆಡಳಿತ ವಿಭಾಗವು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಭಾನುವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದುಮ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು. ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಹೈಕೋರ್ಟ್ ಸೂಚನೆಯ ಮೇರೆಗೆ ಮಾಲ್ ವ್ಯವಸ್ಥಾಪಕರೊಂದಿಗೆ ಪೊಲೀಸ್ ಆಯುಕ್ತರು ಸಮಾಲೋಚನೆ ನಡೆಸಿದ್ದಾರೆ.
ಮಂಗಳವಾರ ಪೊಲೀಸ್ ಆಯುಕ್ತರು ಖುದ್ದು ಭೇಟಿ ನೀಡಿ ಮಾಲ್ನ ಸುತ್ತಮುತ್ತಲಿನ ಸಂಚಾರ ದಟ್ಟಣೆಯನ್ನು ಪರಿಶೀಲಿಸಿದ್ದಾರೆ. ಅತಿಯಾದ ಶಬ್ಧ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹಿನ್ನೆಲೆ ಮಾಲ್‌ಗೆ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ವಿವರಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಜ.5 ಕ್ಕೆ ಮುಂದೂಡಿತು. ಆದರೆ, ಅಲ್ಲಿಯವರೆಗೆ ಮಾಲ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.
ಪ್ರಕರಣದ ಹಿನ್ನೆಲೆ ಏನು ? ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಮಾಲ್ ಆಫ್ ಏಷ್ಯಾ ಅಕ್ಟೋಬರ್ 22, 2023 ರಂದು ಸಾರ್ವಜನಿಕರಿಗೆ ತೆರೆಯಲಾಗಿದೆ.
ಪಾರ್ಕಿಂಗ್ ಸೌಲಭ್ಯ, ಟ್ರಾಫಿಕ್ ನಿಯಂತ್ರಣ ಮತ್ತು ಇತರ ಬಗ್ಗೆ ಮಾಲ್ ಆಡಳಿತವು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಅಕ್ಟೋಬರ್ 11, 2023 ರಂದು ನೋಟಿಸ್ ನೀಡಿದ್ದರು. ಇದಕ್ಕೆ ಅಕ್ಟೋಬರ್ 20 ರಂದು ಪ್ರತಿಕ್ರಿಯಿಸಿದ್ದ ಮಾಲ್ ಆಡಳಿತ ವಿಭಾಗ , ಅಗತ್ಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿತ್ತು. ಇದಾದ ಬಳಿಕ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಡಿಸೆಂಬರ್ 30 ರಂದು ಹೊರಡಿಸಲಾಗಿತ್ತು.
ವಾಹನ ದಟ್ಟಣೆ, ಸಂಚಾರ ಅಸ್ತವ್ಯಸ್ತ ಆಗಿದ್ದ ಹಿನ್ನೆಲೆಯಲ್ಲಿ 2023 ಡಿಸೆಂಬರ್ 31 ರಿಂದ 2024ರ ಜನವರಿ 15 ರ ವರೆಗೆ ಮಾಲ್‌ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವಂತೆ ನಿರ್ದೇಶಿಸಲಾಗಿತ್ತು. ಅಲ್ಲದೆ ಮಾಲ್ ಮಂಭಾಗದಲ್ಲಿಯೂ ಕ್ರಿಮಿನಲ್ ಪ್ರೊಸಿಜರ್ ಕೋಡ್‌ನ ಸೆಕ್ಷನ್ 144 ರ ಅಡಿಯಲ್ಲಿ (ನಿಷೇಧಾಜ್ಞೆ) ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿಂದೆ ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರರ ಪರ ವಕೀಲರು, ಮಾಲ್‌ಗೆ ನಿಷೇಧಾಜ್ಞೆ ಹೊರಡಿಸಿರುವ ಕ್ರಮ ಅನ್ಯಾಯದಿಂದ ಕೂಡಿದೆ. ಮಾಲ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಬೇಕು ಎಂದು ಹೇಳುವುದರಿಂದ ಆದೇಶವು ಅಸ್ಪಷ್ಟವಾಗಿದೆ. ಇದು ಜನವರಿ 25ರ ವರೆಗೆ ಮಾಲ್ ಅನ್ನು ಮುಚ್ಚುವುದರಿಂದ ಪರಿಣಾಮವನ್ನು ಬೀರುತ್ತದೆ. ಸಮಸ್ಯೆ ಅಷ್ಟು ಗಂಭೀರವಾಗಿಲ್ಲ, ಅಂತಹ ಗಂಭೀರ ಕ್ರಮದ ಅಗತ್ಯವಿಲ್ಲ ಎಂದು ವಾದಿಸಿದ್ದರು.
ಇದನ್ನೂಓದಿ:ಚುನಾವಣಾ ಸಂದರ್ಭ ಉಚಿತ ಕೊಡುಗೆ ಪ್ರಶ್ನಿಸಿ ಅರ್ಜಿ, ವಿಚಾರಣೆ ಮುಂದೂಡಿದ ಹೈಕೋರ್ಟ್