ಬೆಂಗಳೂರು: ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಭಿಪ್ರಾಯದಂತೆ ಹುಬ್ಬಳ್ಳಿ - ಅಂಕೋಲಾ ರೈಲು ಮಾರ್ಗದ ಕುರಿತು ಪರಿಷ್ಕೃತ ಯೋಜನೆಯನ್ನು ಸಲ್ಲಿಸುವುದಾಗಿ ನೈಋತ್ಯ ರೈಲ್ವೆ ವಲಯ ಸಲ್ಲಿಸಿದ ಪ್ರಮಾಣ ಪರಿಗಣಿಸಿರುವ ಹೈಕೋರ್ಟ್, ಹುಬ್ಬಳ್ಳಿ - ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗ ಯೋಜನೆಗೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಹುಬ್ಬಳ್ಳಿ- ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಇದಾಗಿದೆ. ಈ ಯೋಜನೆಗೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್ 20ರಂದು ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಮತ್ತು ಗಿರಿಧರ್ ಕುಲಕರ್ಣಿ ಎಂಬುವರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಎಂಜೆಎಸ್ ಕಮಲ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ, ರೈಲ್ವೆ ಸಚಿವಾಲಯವನ್ನು ಪ್ರತಿನಿಧಿಸುವ ವಕೀಲರು, ನೈಋತ್ಯ ರೈಲ್ವೆ ವಲಯದ ಡೆಪ್ಯೂಟಿ ಚೀಫ್ ಎಂಜಿನಿಯರ್ ಸಿ.ಪಿ. ರೆಡ್ಡಿ ಪರವಾಗಿ ಪ್ರಮಾಣಪತ್ರ ಸಲ್ಲಿಸಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಸಲ್ಲಿಸಿದೆ.
2020ರ ಮಾರ್ಚ್ 20ರಂದು ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ 2020ರ ಜೂನ್ 18ರಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ನಂತರ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸುತ್ತ ಬಂದಿತ್ತು. ಇದೀಗ ಹೈಕೋರ್ಟ್ ಇತ್ಯರ್ಥಪಡಿಸಿದೆ.
ಪ್ರಮಾಣಪತ್ರದಲ್ಲಿರುವ ಅಂಶಗಳು: ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ದೇಶನಗಳನ್ನು ಪಾಲನೆ ಮಾಡಬೇಕಿದೆ. ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಕೇಂದ್ರದ ಜತೆ ಸಮಾಲೋಚನೆ ನಡೆಸಿ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಯೋಜನೆಯ ಮಿಟಿಗೇಷನ್ ಪ್ಲಾನ್ ಅನ್ನು ಸಿದ್ಧಪಡಿಸಬೇಕು. ಎನ್‌ಬಿಡಬ್ಲೂಎಲ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಹವಾಮಾನ ವೈಪರೀತ್ಯ ಸಚಿವಾಲಯದ ನಿರ್ದೇಶನಗಳನ್ನು ಪಾಲಿಸಲಾಗುವುದು ಮತ್ತು ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.
ಅಲ್ಲದೆ, ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಿಂದ 34 ಕಿ.ಮೀ. ದೂರದವರೆಗೆ ಅರಣ್ಯ ಪ್ರದೇಶವಿಲ್ಲದ ಜಾಗದಲ್ಲಿ 100 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸಿದೆ. ಉಳಿದ ಮಾರ್ಗ ಅರಣ್ಯದಲ್ಲಿ ಹಾದು ಹೋಗುವುದರಿಂದ ಯೋಜನೆ ಜಾರಿಗೆ ನೈಋತ್ಯ ರೈಲ್ವೆ ವಲಯ ಅಗತ್ಯ ಕಡ್ಡಾಯ ಅನುಮತಿಗಳಿಗಾಗಿ ಕಾಯುತ್ತಿದೆ. ಯೋಜನೆಯನ್ನು 1996-97ರಲ್ಲಿಯೇ ಅನುಮೋದಿಸಲಾಗಿತ್ತು. ಆದರೆ, ಹಲವು ವರ್ಷಗಳು ಕಳೆದರೂ ಅದನ್ನು ಪೂರ್ಣಗೊಳಿಸಲಾಗಿಲ್ಲ, ಇದರಿಂದ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುತ್ತಿಲ್ಲ ಮತ್ತು ಯೋಜನಾ ವೆಚ್ಚ ಹೆಚ್ಚಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಜೊತೆಗೆ, ಹೈಕೋರ್ಟ್ ಆದೇಶದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡ್ಲೂಎಲ್) ಸಮಿತಿ ರಚನೆ ಮಾಡಿತ್ತು, ಆ ಸಮಿತಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಆ ಸಮಿತಿ ನಡೆಸಿದ ಸಭೆಯಲ್ಲಿ ರೈಲ್ವೆ ಸಚಿವಾಲಯದ ಅಧಿಕಾರಿಗಳೂ ಸಹ ಭಾಗವಹಿಸಿದ್ದರು ಮತ್ತು ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗದ ಕುರಿತು ರೈಲ್ವೆ ಪರವಾಗಿ ಪ್ರಸ್ತಾವ ಮಂಡಿಸಲಾಗಿದೆ. ಆ ಸಮಿತಿಯ ಶಿಫಾರಸುಗಳಂತೆ ರೈಲ್ವೆಗೆ ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಪರಿಷ್ಕೃತ ಯೋಜನೆಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ನೈಋತ್ಯ ರೈಲ್ವೆ ವಲಯ ನ್ಯಾಯಾಲಯವನ್ನು ಕೋರಿತ್ತು.
ಇದನ್ನೂ ಓದಿ: ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಹತೆ ನಿರ್ಧರಿಸುವ ಅಧಿಕಾರ ವೈದ್ಯಕೀಯ ಮಂಡಳಿಗೆ ಇಲ್ಲ: ಹೈಕೋರ್ಟ್