ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ನಾಯಿಕೊಡೆಗಳಂತೆ ಅನಧಿಕೃತ ಚುನಾವಣಾ ಹೋರ್ಡಿಂಗ್‌ಗಳು ತಲೆ ಎತ್ತುತ್ತಿರುವುದರಿಂದ ಸಾರ್ವಜನಿಕರು, ಅದರಲ್ಲೂ ಮುಖ್ಯವಾಗಿ ನಗರದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಮತ್ತಿತರರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಮೆಮೋ ಸಲ್ಲಿಸಿ, 2023ರ ಆ. 30ರಿಂದ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಗಳ ಕುರಿತು 701 ಪ್ರಕರಣಗಳನ್ನು ದಾಖಲಿಸಲಾಗಿದೆ. 2022ರಲ್ಲಿ 76, 2021ರಲ್ಲಿ 19, 2020ರಲ್ಲಿ 120 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಪ್ರಕರಣಗಳ ಪೈಕಿ 164 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. 17 ಪ್ರಕರಣಗಳು ಇತ್ಯರ್ಥಗೊಂಡಿದ್ದು, 132 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. 2023ರ ಆಗಸ್ಟ್ ತಿಂಗಳ ಒಂದರಲ್ಲೇ 327 ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರ ವರದಿ ಸಲ್ಲಿಸಿ, ಕರ್ನಾಟಕ ಮುಕ್ತ ಪ್ರದೇಶದ ವಿರೂಪ ತಡೆ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿ, ನಗರದ ಎಲ್ಲಾ ವಲಯಗಳ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು 2023ರ ಆ. 23ರಂದು ನಿರ್ದೇಶಿಸಿದ್ದಾರೆ.
ಗಸ್ತು ಮಾಡುವ ವೇಳೆ ಅನಧಿಕೃತ ಜಾಹೀರಾತು ಅಳವಡಿಸುತ್ತಿರುವುದು ಕಂಡುಬಂದಲ್ಲಿ, ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಎಲ್ಲಾ ಸ್ಥಳಗಳನ್ನು ಪರಿಶೀಲಿಸಿ, ಹೆಚ್ಚಿನ ಪ್ರಕರಣ ದಾಖಲಿಸಬೇಕು. ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ನೆರವು ಪಡೆದು ಕ್ರಮ ಜರುಗಿಸಬೇಕು. ಆದಾಗ್ಯೂ ಮುಂದಿನ ದಿನಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳು ಅಳವಡಿಸಿರುವುದು ಕಂಡುಬಂದರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಮುಂದಿನ ಇಲಾಖಾ ಶಿಸ್ತು ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ವರದಿ ಕಳುಹಿಸಿಕೊಡುವಂತೆ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದೆ.
ಈ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಹೆಚ್ಚುತ್ತಿದೆ. ಈ ಬೆಳವಣಿಗೆಯು ಪಾಲಿಕೆಯ ಅಧಿಕಾರಿಗಳು ತಮ್ಮ ಕರ್ತವ್ಯಗಳಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿರುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅವರ ವಾದವು ನ್ಯಾಯ ಸಮ್ಮತವಾಗಿದ್ದು, ಜಾಹೀರಾತು ಹಾವಳಿಯಿಂದ ಸಾರ್ವಜನಿಕರು ಮತ್ತು ನಿರ್ದಿಷ್ಟವಾಗಿ ಬೆಂಗಳೂರು ನಗರದ ನಾಗರಿಕರು ಬಳಲುತ್ತಿದ್ದಾರೆ ಎಂದು ನ್ಯಾಯಪೀಠ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ನಗರದಲ್ಲಿ ಅನಧಿಕೃತ ಚುನಾವಣಾ ಹೋರ್ಡಿಂಗ್, ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದು ಸುಗಮ ಸಂಚಾರಕ್ಕೆ ಗಂಭೀರ ಅಡಚಣೆ ಉಂಟುಮಾಡುವುದು ಮಾತ್ರವಲ್ಲದೆ, ಬಹಳಷ್ಟು ಅನಾನುಕೂಲತೆ ಸೃಷ್ಟಿಸುತ್ತಿವೆ. ಈ ಪರಿಸ್ಥಿತಿ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯೋನ್ಮುಖವಾಗಬೇಕು. ಆ ಕುರಿತು ಬಿಬಿಎಂಪಿ ಸಮಗ್ರವಾದ ವರದಿಯನ್ನು ಮುಂದಿನ ಮೂರು ವಾರದಲ್ಲಿ ಸಲ್ಲಿಸಬೇಕು ಎಂದು ಸೂಚಿಸಿತು. ಅಲ್ಲದೆ, ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಲಿದೆ ಎಂಬುದಾಗಿ ನ್ಯಾಯಪೀಠ ಇದೇ ವೇಳೆ ನಂಬಿಕೆ ಹಾಗೂ ವಿಶ್ವಾಸ ವ್ಯಕ್ತಪಡಿಸಿ ವಿಚಾರಣೆಯನ್ನು ಅ.11ಕ್ಕೆ ಮುಂದೂಡಿತು.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಮತ್ತು ಭಗ್ನಾವಶೇಷ ವಿಲೇವಾರಿ ನಿಯಮ ಮೀರಿದರೆ ಕಠಿಣ ಕ್ರಮ