ಬೆಂಗಳೂರು: ಆಫ್ಲೈನ್ ಬದಲು ಆನ್‌ಲೈನ್ ಮೂಲಕ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ನಿರ್ದೇಶನ ನೀಡುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಇದೇ ಫೆ.8ರಿಂದ ಆಫ್ಲೈನ್ ಸೆಮಿಸ್ಟರ್ ಪರೀಕ್ಷೆ ನಿಗದಿಪಡಿಸಿ ವಿಟಿಯು ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಪಿ.ಎಸ್. ಶ್ರೇಯಸ್ ಸೇರಿ 120 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಆರ್. ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ತಜ್ಞರು ನಿರ್ಧರಿಸಬೇಕಾದ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಆನ್‌ಲೈನ್ ಪರೀಕ್ಷೆ ನಡೆಸುವಂತೆ ವಿಟಿಯುಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥಪಡಿಸಿತು. ಜತೆಗೆ, ಪರೀಕ್ಷೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೋವಿಡ್ ಲಕ್ಷಣ ಇದ್ದವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಟಿಯುಗೆ ಹೈಕೋರ್ಟ್ ನಿರ್ದೇಶಿಸಿತು.
ಓದಿ: ಗಣರಾಜ್ಯೋತ್ಸವದಂದು ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವರ ನೇಮಕ
ಇದಕ್ಕೂ ಮುನ್ನ ವಿಟಿಯು ಪರ ವಕೀಲರು ವಾದಿಸಿ, ಆನ್‌ಲೈನ್ ಪರೀಕ್ಷೆಗಳನ್ನು ನಡೆಸಿದರೆ ಪರೀಕ್ಷೆ ಬರೆಯುವವರ ಮೇಲೆ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಇದರಿಂದ, ಪರೀಕ್ಷಾ ಅಕ್ರಮಗಳು ನಡೆಯುವ ಸಾಧ್ಯತೆ ಇರುತ್ತದೆ. ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಸಂದರ್ಭದಲ್ಲಿಯೂ ಅನೇಕ ಪರೀಕ್ಷೆಗಳನ್ನು ಆನ್ ಲೈನ್ ಮೂಲಕವೇ ನಡೆಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಸ್‌ಒಪಿಗಳ ಅನುಸಾರವೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ರೂಪಾಂತರಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ವಿಟಿಯು ಅಧಿಸೂಚನೆ ರದ್ದುಪಡಿಸಬೇಕು ಹಾಗೂ ಆಫ್ಲೈನ್ ಬದಲಿಗೆ ಆನ್‌ಲೈನ್ ಪರೀಕ್ಷೆ ನಡೆಸಲು ನಿರ್ದೇಶಿಸಬೇಕು ಎಂದು ವಿದ್ಯಾರ್ಥಿಗಳು ಕೋರಿದ್ದರು.