ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ದೆಹಲಿ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ರಾಜ್ಯ ಸರ್ಕಾರ ನೀಡಿದ್ದ ಆದೇಶ ಪ್ರಶ್ನಿಸಿ, ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.
2019ರ ಸೆಪ್ಟೆಂಬರ್ನಲ್ಲಿ ರಾಜ್ಯ ಸರ್ಕಾರವು ಡಿ.ಕೆ. ಶಿವಕುಮಾರ್ ಮತ್ತಿತರರ ವಿರುದ್ಧ ಐಟಿ ದಾಖಲಿಸಿದ್ದ ಪ್ರಕರಣಗಳನ್ನು ತನಿಖೆ ನಡೆಸಲು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಗೆ ವಹಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಶಶಿಕುಮಾರ್ ಶಿವಣ್ಣ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ನಟರಾಜ್ ಅವರಿದ್ದ ಪೀಠ ಮನವಿ ತಿರಸ್ಕರಿಸಿ ಆದೇಶ ಹೊರಡಿಸಿದೆ.
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಇಡಿ ದಾಖಲಿಸಿರುವ ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿದೆ. ರಾಜ್ಯದಲ್ಲಿ ಸಿಬಿಐ ತನಿಖೆಗೆ ಸರ್ಕಾರದ ಸಮ್ಮತಿಸಬೇಕು. ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರದ ಬಗ್ಗೆ ಆರೋಪಗಳಿವೆ. ಹೀಗಾಗಿ ತನಿಖೆಗೆ ಸರ್ಕಾರದ ಸಮ್ಮತಿ ಅಗತ್ಯವಿತ್ತು ಎಂದು ವಾದಿಸಿದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಸರ್ಕಾರ ದೆಹಲಿ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿ ಸಮ್ಮತಿ ನೀಡಲಾಗಿದ್ದು, ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ. ಸಮ್ಮತಿಗೆ ಸರ್ಕಾರ ಸವಿವರವಾದ ಕಾರಣ ನೀಡಬೇಕಿಲ್ಲ ಎಂದಿದ್ದರು. ಸರ್ಕಾರದ ಪರ ಹಾಗೂ ಸಿಬಿಐ ಪರ ವಕೀಲರ ವಾದ ಪುರಸ್ಕರಿಸಿರುವ ಪೀಠ ಡಿಕೆಶಿ ಪರ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದೆ.